ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಮೀನುಗಾರಿಕೆ ಮುಗಿಸಿ ವಾಪಾಸು ಬರುತ್ತಿದ್ದ ಸಂದರ್ಭ ಆಯತಪ್ಪಿ ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಮರವಂತೆಯಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ.
ಮರವಂತೆ ಕುಪ್ಪನಮನೆ ನಿವಾಸಿ ಪರಮಜ್ಯೋತಿ (43) ಮೃತಪಟ್ಟ ಮೀನುಗಾರರು.
ಮರವಂತೆಯ ಪ್ರದೀಪ್ ಖಾರ್ವಿ ಎಂಬುವರ ಧರ್ಮದೇವತೆ ದೋಣಿಯಲ್ಲಿ ಮೀನುಗಾರಿಕೆಗೆ ಹೋಗಿದ್ದ ಪರಮಜ್ಯೋತಿ ಅವರು ಮೀನುಗಾರಿಕೆ ಮುಗಿಸಿ ವಾಪಸ್ಸು ಮರವಂತೆ ಬಂದರಿಗೆ ಬರುವಾಗ ಅರಬಿ ಸಮುದ್ರದಲ್ಲಿ ಒಮ್ಮೆಲೇ ಜೋರಾಗಿ ಗಾಳಿ ಬೀಸಿದ ಕಾರಣ ದೋಣಿಯು ನೀರಿನಲ್ಲಿ ತೇಲಾಡಿದ ಪರಿಣಾಮ ಪರಮಜ್ಯೋತಿ ಆಯತಪ್ಪಿ ದೋಣಿಯಿಂದ ಸಮುದ್ರಕ್ಕೆ ಬಿದ್ದಿದ್ದಾರೆ. ಕೂಡಲೇ ಅವರನ್ನು ದೋಣಿಯಲ್ಲಿದ್ದ ಕೆಲಸಗಾರರು ನೀರಿನಿಂದ ಮೇಲಕ್ಕೆ ಎತ್ತಿ ಚಿಕಿತ್ಸೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ವೈದ್ಯರು ಪರೀಕ್ಷಿಸಿ ಅದಾಗಲೇ ಪರಮಜ್ಯೋತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















