ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ರೋಟರಿ ಕ್ಲಬ್ ತೆಕ್ಕಟ್ಟೆ 2025–2026ರ ರೋಟರಿ ವರ್ಷದಲ್ಲಿ ಅತ್ಯುತ್ತಮ ಸಾಧನೆಗಾಗಿ ಪ್ರತಿಷ್ಠಿತ ಎಕ್ಸಲೆನ್ಸ್ ಕ್ಲಬ್ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ಪಡೆದು ಹೆಮ್ಮೆಯ ಸಾಧನೆ ಮಾಡಿದೆ. ಇದರೊಂದಿಗೆ ಕ್ಲಬ್‌ಗೆ ವಿವಿಧ ವಿಭಾಗಗಳಲ್ಲಿ ಇನ್ನೂ 12 ಪ್ರಶಸ್ತಿಗಳು ಲಭಿಸಿವೆ.
ವರ್ಷಪೂರ್ತಿ ಕೈಗೊಂಡ ಸಮಾಜಸೇವಾ ಕಾರ್ಯಕ್ರಮಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ತೋರಿದ ಅತ್ಯುತ್ತಮ ಸಾಧನೆಗೆ ಈ ಪ್ರಶಸ್ತಿಗಳು ದೊರೆತಿವೆ. ಈ ಸಾಧನೆಯು ಕ್ಲಬ್‌ನ ಸದಸ್ಯರ ಸಾಮೂಹಿಕ ಪ್ರಯತ್ನ, ಬದ್ಧತೆ, ಸಕ್ರಿಯ ಭಾಗವಹಿಸುವಿಕೆ ಮತ್ತು ನಿಸ್ವಾರ್ಥ ಸೇವೆಗೆ ದೊರೆತ ಮಾನ್ಯತೆಯಾಗಿದೆ.
2025–2026ರ ರೋಟರಿ ವರ್ಷದ ಅಧ್ಯಕ್ಷ ರೋಟೇರಿಯನ್ ಸುಧೀರ್ ಮಲ್ಯಾಡಿ ಅವರ ಸಮರ್ಥ ನಾಯಕತ್ವದಲ್ಲಿ ಈ ಸಾಧನೆ ಸಾಧ್ಯವಾಗಿದೆ. ಈ ಸಂದರ್ಭದಲ್ಲಿ ಅಧ್ಯಕ್ಷ ರೋಟೇರಿಯನ್ ಸುಧೀರ್ ಮಲ್ಯಾಡಿ ಹಾಗೂ ಕಾರ್ಯದರ್ಶಿ ರೋಟೇರಿಯನ್ ಟಿ. ರಾಜೀವ್ ಶೆಟ್ಟಿ ಅವರು ಕ್ಲಬ್‌ನ ಎಲ್ಲಾ ಸದಸ್ಯರ ಸಹಕಾರ ಮತ್ತು ಸಮರ್ಪಣೆಯನ್ನು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಪ್ರಶಸ್ತಿಯು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ಸಾಹ ಮತ್ತು ಬದ್ಧತೆಯೊಂದಿಗೆ ಸಮಾಜಸೇವಾ ಕಾರ್ಯಗಳನ್ನು ಕೈಗೊಳ್ಳಲು ಪ್ರೇರಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
















