ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಡಾ. ಬಿ.ಆರ್. ಅಂಬೇಡ್ಕರ್ ಮಹಿಳಾ ಸಂಘ ರಿ. ಬೈಂದೂರು ವತಿಯಿಂದ ಇಲ್ಲಿನ ರತ್ತು ಬಾಯಿ ಜನತಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆಯುವ ‘ಅಕ್ಷರ ಬೆಳಕು’ ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಿತು.

ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ದ.ಸಂ.ಸಮಿತಿ ಸಂಘಟನಾ ಸಂಚಾಲಕರಾದ ಮಂಜುನಾಥ ನಾಗೂರು ಉದ್ಘಾಟಿಸಿ, ಮಾತನಾಡಿ, ಸಂಘವು ಸತತ ನಾಲ್ಕು ವರ್ಷಗಳಿಂದ ಪ್ರತಿವರ್ಷ ನಾಲ್ವರು ಅರ್ಹ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದು, ಅವರ ಶಿಕ್ಷಣ ಮುಂದುವರಿಸಲು ಅಗತ್ಯವಿರುವ ಸಂಪೂರ್ಣ ಆರ್ಥಿಕ ನೆರವು ಹಾಗೂ ಪ್ರೋತ್ಸಾಹವನ್ನು ನೀಡುತ್ತಾ ಬರುತ್ತಿರುವುದು ಶ್ಲಾಘನೀಯ ಎಂದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ದಲಿತ ಸಂಘರ್ಷ ಸಮಿತಿ (ದ.ಸಂ.ಸ) ಮಹಿಳಾ ಒಕ್ಕೂಟದ ಅಧ್ಯಕ್ಷರಾದ ವಿನಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಕಾಶ್ ಎಂ. ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪ್ರದೀಪ್ ಕುಮಾರ್ ಜಿ.ಎಂ. ಅವರು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷಾ ಕಲಿಕೆ, ಕೌಶಲ್ಯ ಹಾಗೂ ವ್ಯಾಕರಣದ ಮಹತ್ವದ ಕುರಿತು ಉಪಯುಕ್ತ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.
ವೇದಿಕೆಯಲ್ಲಿ ಬೈಂದೂರು ತಾಲೂಕು ದ.ಸಂ.ಸ ಸಂಚಾಲಕರಾದ ಶಿವರಾಜ್ ಬೈಂದೂರು ಹಾಗೂ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ದ.ಸಂ.ಸ ಜಿಲ್ಲಾ ಮಹಿಳಾ ಒಕ್ಕೂಟದ ಸಂಘಟನಾ ಸಂಚಾಲಕರಾದ ಗೀತಾ ಸುರೇಶ್ ಕುಮಾರ್ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಚೈತ್ರ ಕಾರ್ಯಕ್ರಮ ನಿರೂಪಿಸಿ, ಸದಸ್ಯರಾದ ಶಕೀಲಾ ವಂದಿಸಿದರು.
















