ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ವಿದ್ಯಾರ್ಥಿಗಳ ಉದ್ಯೋಗಾರ್ಹತೆ ಹೆಚ್ಚಿಸುವ ನಿಟ್ಟಿನಲ್ಲಿ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು (IMJISC), ಮೂಡ್ಲಕಟ್ಟೆ ಇದರ ತರಬೇತಿ ಮತ್ತು ಉದ್ಯೋಗ ಘಟಕವು ಪ್ರತಿಷ್ಠಿತ ಸ್ಕಿಲ್ ಆರ್ಬಿಟ್ ಸಂಸ್ಥೆಯೊಂದಿಗೆ ಒಡಂಬಡಿಕೆ (MoU) ಮಾಡಿಕೊಂಡಿದೆ.
ಒಡಂಬಡಿಕೆಯ ಅಂಗವಾಗಿ ಕಾಲೇಜಿನಲ್ಲಿ ಉದ್ಯಮಾಧಾರಿತ ಆಡ್-ಆನ್ ಕೋರ್ಸ್‌ಗಳ ಕುರಿತು ವಿಶೇಷ ಕಾರ್ಯಾಗಾರ ಆಯೋಜಿಸಲಾಗಿತ್ತು. ಕಾರ್ಯಾಗಾರದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ (AIML), ಸೈಬರ್ ಸೆಕ್ಯುರಿಟಿ, ಹಣಕಾಸು ಮತ್ತು ಷೇರುಪೇಟೆ, ಡಿಜಿಟಲ್ ಹಾಗೂ ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ಮತ್ತು ಮಾನವ ಸಂಪನ್ಮೂಲ ನಿರ್ವಹಣೆ (HRM) ಕ್ಷೇತ್ರಗಳ ಕೋರ್ಸ್‌ಗಳ ಕುರಿತು ವಿಸ್ತೃತ ಮಾಹಿತಿ ನೀಡಲಾಯಿತು.
ಆಕ್ಸೆಂಚರ್ ಸಂಸ್ಥೆಯ ಬ್ಯಾಕೆಂಡ್ ಎಐ ಇಂಜಿನಿಯರ್ ಹಾಗೂ ಸ್ಕಿಲ್ ಆರ್ಬಿಟ್‌ನ ಎಐಎಂಎಲ್ ಮಾರ್ಗದರ್ಶಕಿ ಗಂಟಾ ಶ್ರುತಿ, ಎಚ್‌ಆರ್ ಮ್ಯಾನೇಜರ್ ಪವನ್ ಕೊಡುರಿ ಹಾಗೂ ಪ್ರಾಡಕ್ಟ್ ಮ್ಯಾನೇಜರ್ ಮನೋಜ್ ಚಿಂತಡ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಉದ್ಯಮದ ಪ್ರಸ್ತುತ ಬೇಡಿಕೆಗಳು ಮತ್ತು ಕೌಶಲ್ಯಗಳ ಕುರಿತು ಮಾರ್ಗದರ್ಶನ ನೀಡಿದರು.
ಬಿಸಿಎ, ಬಿ.ಕಾಂ ಮತ್ತು ಬಿಬಿಎ ವಿಭಾಗಗಳ ಪ್ರಥಮ, ದ್ವಿತೀಯ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಪದವಿ ಶಿಕ್ಷಣದ ಜೊತೆಗೆ ಉದ್ಯಮಕ್ಕೆ ಪೂರಕವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಆಡ್-ಆನ್ ಕೋರ್ಸ್‌ಗಳಿಗೆ ನೋಂದಾಯಿಸಿಕೊಂಡಿರುವುದು ವಿಶೇಷವಾಗಿತ್ತು.
ಪ್ರಸ್ತುತ ಉದ್ಯಮದ ಅಗತ್ಯಗಳಿಗೆ ತಕ್ಕಂತೆ ಪ್ರಾಯೋಗಿಕ ಅನುಭವ ಮತ್ತು ವೃತ್ತಿಪರ ಕೌಶಲ್ಯಗಳನ್ನು ಒದಗಿಸುವುದೇ ಈ ಸಹಭಾಗಿತ್ವದ ಮುಖ್ಯ ಉದ್ದೇಶವಾಗಿದೆ. ತರಬೇತಿ ಮತ್ತು ಉದ್ಯೋಗಾಧಿಕಾರಿಗಳಾದ ಪವನ್‌ದಾಸ್ ಮತ್ತು ನಿಧಿ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.
















