ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಪಾಂಡೇಶ್ವರ ವಲಯದ ಗುಂಡ್ಮಿ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಮಾಹಿತಿ ತಂತ್ರಜ್ಞಾನ ಆಧಾರಿತ ಕೃಷಿ ಮಾರುಕಟ್ಟೆ ಕುರಿತು ಕೃಷಿ ತರಬೇತಿ ಕಾರ್ಯಕ್ರಮವು ಬುಧವಾರ ಗುಂಡ್ಮಿ ಪಾತಾಳಬೆಟ್ಟು ಪರಿಸರದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಕೋಟ ಸಿಎ ಬ್ಯಾಂಕಿನ ಉಪಾಧ್ಯಕ್ಷ ರವೀಂದ್ರ ಕಾಮತ್ ಉದ್ಘಾಟಿಸಿ ಶುಭ ಹಾರೈಸಿದರು. ತರಬೇತಿಯಲ್ಲಿ ಬ್ರಹ್ಮಾವರ ತಾಲೂಕಿನ ಕೃಷಿ ಮೇಲ್ವಿಚಾರಕ ರಾಘವೇಂದ್ರ ಪ್ರಾಸ್ತಾವಿಕ ನುಡಿಯನ್ನಾಡಿದರು.
ಸಂಪನ್ಮೂಲ ವ್ಯಕ್ತಿ ರೈತಧ್ವನಿ ಸಂಘ ಕೋಟ ಅಧ್ಯಕ್ಷ ಜಯರಾಮ್ ಶೆಟ್ಟಿ ಮಾತನಾಡಿ ಇಂದಿನ ದಿನಗಳಲ್ಲಿ ರೈತರು ತಾವು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ತುಂಬಾ ನೋವಿನ ವಿಷಯವಾಗಿದೆ. ಆದರೆ ನಮ್ಮ ರೈತರಲ್ಲಿ ಪ್ರಸ್ತುತ ದಿನಗಳಲ್ಲಿ ತಾಳ್ಮೆ ಎನ್ನುವುದು ತುಂಬಾ ಕಡಿಮೆಯಾಗಿದೆ. ಬೆಳೆದ ಬೆಳೆಯನ್ನು ರೈತರು ಹೊಲದಿಂದಲೇ ನೇರ ಮಾರುಕಟ್ಟೆಗೆ ಕಳಿಸುವುದರಿಂದ ನಾವು ನಿರೀಕ್ಷೆ ಮಾಡಿದ ಬೆಲೆ ನಮಗೆ ಸಿಗುವುದಿಲ್ಲ ಆದ್ದರಿಂದ ರೈತರು ತಮ್ಮ ಬೆಳೆಯನ್ನ ಉತ್ತಮ ಬೆಲೆಗೆ ಮಾರಾಟ ಮಾಡಬೇಕು ಎಂದರೆ ಬೆಳೆದ ಬೆಳೆಯನ್ನ ಸಂಸ್ಕರಿಸಿ ಸಂಗ್ರಹಿಸಿ ಉತ್ತಮ ಬೆಲೆ ಬಂದಾಗ ಮಾರಾಟ ಮಾಡಿದಾಗ ಮಾತ್ರ ಒಳ್ಳೆ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ ಹಾಗೂ ರೈತರು ಒಗ್ಗಟ್ಟಾಗಿ ನಿಂತು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಿದಾಗ ಉತ್ತಮ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ತರಬೇತಿಯಲ್ಲಿ ಕೃಷಿ ಪ್ರಶಸ್ತಿ ವಿಜೇತರಾದ ಶೇಖರ್ ಪೂಜಾರಿ ಅವರನ್ನು ಅಭಿನಂದಿಸಲಾಯಿತು. ಮುಖ್ಯ ಅಥಿತಿಯಾಗಿ ತಾಲೂಕು ಶೌರ್ಯ ವಿಪತ್ತು ಘಟಕ್ ಮುಖ್ಯಸ್ಥ ಕಾಳಿಂಗ ಪೂಜಾರಿ ಉಪಸ್ಥಿತರಿದ್ದರು.ತರಬೇತಿಯನ್ನು ವಲಯದ ಮೇಲ್ವಿಚಾರಕ ಜಗದೀಶ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ನಿರೂಪಿಸಿದರು, ಶೇಖರ್ ಪೂಜಾರಿ ಸ್ವಾಗತಿಸಿ, ಸೇವಾ ಪ್ರತಿನಿಧಿ ಶಶಿಕಲಾ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರು, ಪ್ರಗತಿ ಬಂದು ಸ್ವ ಸಹಾಯ ಸಂಘದ ಸದಸ್ಯರು ಗ್ರಾಮಸ್ಥರು ಪಾಲ್ಗೊಂಡರು.
















