ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ‘ಸಣ್ಣ ಕಥೆಗಳು ಮನುಷ್ಯನ ಜೀವನದಲ್ಲಿ ಅವನನ್ನು ಗಾಢವಾಗಿ ತಟ್ಟುವ ಯಾವುದಾದರೊಂದು ಸನ್ನಿವೇಶವನ್ನು ಕಲಾತ್ಮಕವಾಗಿ ಚಿತ್ರಿಸುತ್ತವೆ. ಅವುಗಳಲ್ಲಿ ಮನುಷ್ಯನನ್ನು ಬದುಕಿನ ಬಗ್ಗೆ ಗಂಭೀರವಾಗಿ ಚಿಂತಿಸುವಂತೆ ಮಾಡಬಲ್ಲ ಮೌಲ್ಯ ಸಂದೇಶಗಳಿದ್ದರೆ ಕಥೆಗಳ ಘನತೆ ಇನ್ನೂ ಹೆಚ್ಚಾಗುತ್ತದೆ. ಪಾರ್ವತಿ ಐತಾಳರ ಕಥೆಗಳು ನೋಟಕ್ಕೆ ಸರಳವಾಗಿ ಕಂಡರೂ ಅವುಗಳಲ್ಲಿ ಬದುಕಿನ ಬಗೆಗಿನ ಗಂಭೀರ ಹಾಗೂ ಸೂಕ್ಷ್ಮ ಒಳನೋಟಗಳಿರುವ ಸತ್ಯವನ್ನು ಅಲ್ಲಗಳೆಯುವ ಹಾಗಿಲ್ಲ’ ಎಂದು ಲೇಖಕ-ಉಪನ್ಯಾಸಕ ನರೇಂದ್ರ ಎಸ್.ಗಂಗೊಳ್ಳಿ ಹೇಳಿದರು.

ಅವರು ಇಲ್ಲಿನ ಜನಪ್ರತಿನಿಧಿ ಪತ್ರಿಕಾ ಕಚೇರಿಯಲ್ಲಿ ನಡೆದ ಪಾರ್ವತಿ ಜಿ. ಐತಾಳರ ಎರಡು ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ‘ಘಾತ’ ಕಥಾಸಂಕಲನದ ಕುರಿತು ಅವರು ಮಾತನಾಡಿದರು.
ಲೇಖಕಿ-ಉಪನ್ಯಾಸಕಿ ಸುಮತಿ ಶೆಣೈ ಅವರು ಪಾರ್ವತಿ ಐತಾಳರ ‘ಮಲೆಯಾಳ ಸಾಹಿತ್ಯದ ಆರಂಭ ಕಾಲ’ ಎಂಬ ಇನ್ನೊಂದು ಕೃತಿಯ ಬಗ್ಗೆ ಮಾತನಾಡಿ ‘ ಯಾವುದೇ ಸಾಹಿತ್ಯದ ಬೆಳವಣಿಗೆಗೆ ಓದುಗರು ಇತರ ಭಾಷೆಯ ಕೃತಿಗಳನ್ನು ಓದುವುದು ಮಾತ್ರವಲ್ಲದೆ ಆ ಭಾಷೆಯ ಸಾಹಿತ್ಯವು ನಡೆದು ಬಂದ ದಾರಿ ಹಾಗೂ ಅದರ ಇತಿಹಾಸದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಈ ದೃಷ್ಟಿಯಿಂದ ಮಲೆಯಾಳ ಸಾಹಿತ್ಯದ ಚರಿತ್ರೆಯ ಒಳನೋಟವನ್ನು ನೀಡುವ ಈ ಕೃತಿ ಅತ್ಯಂತ ಮಹತ್ವದ್ದಾಗಿದೆ’ ಎಂದರು.
ಆರಂಭದಲ್ಲಿ ಕೃತಿಗಳ ಕರ್ತೃ ಪಾರ್ವತಿ ಜಿ. ಐತಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಪ್ರತಿನಿಧಿ ಪತ್ರಿಕೆಯ ಸಂಪಾದಕರಾದ ಸುಬ್ರಹ್ಮಣ್ಯ ಪಡುಕೋಣೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ವಿಮಲಾ ನಾವುಡ ಉಪಸ್ಥಿತರಿದ್ದರು. ಸುಮನಾ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು. ಜೆಸ್ಸಿ ಎಲಿಝಬೆತ್ ವಂದಿಸಿದರು.
















