ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಶ್ರೀ ವೀರೇಶ್ವರ ಮತ್ತು ಉಮಾಮಹೇಶ್ವರ ದೇವಸ್ಥಾನ ಗಂಗೊಳ್ಳಿ ಇದರ ನೂತನ ಶಿಲಾಮಯ ದೇವಾಲಯ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ಸಂಪನ್ನಗೊಂಡಿತು.
ನೂತನ ಶಿಲಾಮಯ ದೇಗುಲ ನಿರ್ಮಾಣದ ಅಂಗವಾಗಿ ಮನೆ ಮನೆಯಲ್ಲಿ ಭಕ್ತಿಪೂರ್ವಕವಾಗಿ ಪೂಜಿಸಿದ ಅಡಿಗಲ್ಲಿನ ಶಿಲೆಯನ್ನು ಗಂಗೊಳ್ಳಿಯ ಶ್ರೀ ವೀರ ವಿಠಲ ದೇವಸ್ಥಾನದ ಬಳಿಯಿಂದ ಶ್ರೀ ವೀರೇಶ್ವರ ದೇವಾಲಯದ ತನಕ ಮರವಣಿಗೆಯಲ್ಲಿ ತಂದು ಶಿಲಾನ್ಯಾಸ ಮಾಡಲಾಯಿತು. ತಂತ್ರಿಗಳಾದ ಪ್ರೀತಮ್ ಪುತ್ತೂರಾಯ ನೇತೃತ್ವದಲ್ಲಿ ಪುರೋಹಿತರಿಂದ ಧಾರ್ಮಿಕ ವಿಧಿವಿಧಾನಗಳು ನಡೆಯಿತು.
ಶ್ರೀ ಕ್ಷೇತ್ರ ಶೃಂಗೇರಿ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಲೋಕೇಶ ಅಡಿಗ, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ, ದೇವಸ್ಥಾನದ ಪ್ರಧಾನ ಅರ್ಚಕ ಜಿ.ಲಕ್ಷ್ಮೀನಾರಾಯಣ ಭಟ್, ಜಿ.ರವೀಶ್ ಭಟ್, ದೀಪಕ ಕುಮಾರ್ ಶೆಟ್ಟಿ, ಪ್ರಣಯ್ ಕುಮಾರ್ ಶೆಟ್ಟಿ, ಉದ್ಯಮಿ ಜಿ. ಕೇಶವ ಶೇರುಗಾರ್, ದುರ್ಗರಾಜ್ ಪೂಜಾರಿ, ಶಿಲ್ಪಿ ಶಶಿಕುಮಾರ್ ಕಾರ್ಕಳ, ಗ್ರಾಪಂ. ಸದಸ್ಯರು, ಪರಿಸರದ ವಿವಿಧ ದೇವಸ್ಥಾನಗಳ ಅಧ್ಯಕ್ಷರು, ಪ್ರತಿನಿಧಿಗಳು, ಸ್ಥಳೀಯ ಮುಖಂಡರು, ವಿವಿಧ ಸಮಿತಿಗಳ ಸದಸ್ಯರು, ಭಕ್ತರು, ಮತ್ತಿತರರು ಉಪಸ್ಥಿತರಿದ್ದರು.











