ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಸಮಾಜದಲ್ಲಿದ್ದ ಅಧರ್ಮ, ಅನೀತಿ ಹಾಗೂ ಅತ್ಯಂತ ಕೆಟ್ಟ ವ್ಯವಸ್ಥೆ ಉಂಟಾದಾಗ ಮಹಾನ್ ಚೇತನರು ಜನಿಸುತ್ತಾರೆ ಎನ್ನುವುದಕ್ಕೆ ಶ್ರೇಷ್ಠ ನಿದರ್ಶನ ಶ್ರೀ ಕೃಷ್ಣ. ಇವರು ವಿಷ್ಣುವಿನ ಎಂಟನೇ ಅವತಾರವಾಗಿ ಜನಿಸುವುದರೊಂದಿಗೆ ಸಾವಿರಾರು ವರ್ಷಗಳ ಹಿಂದೆ ಸಮಾಜದಲ್ಲಿದ್ದ ಅಧರ್ಮ, ಅನೀತಿ ವಿನಾಶ ಮಾಡಿದ ಮಹಾನ್ ಚೇತನ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಹೇಳಿದರು.
ಅವರು ಶುಕ್ರವಾರ ನಗರದ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀ ಕೃಷ್ಣ ದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಉಡುಪಿ ಶ್ರೀಕೃಷ್ಣನ ನಾಡು. ಇಲ್ಲಿನ ಜನತೆಯ ಬಹುದೊಡ್ಡ ಹಬ್ಬ ಶ್ರೀ ಕೃಷ್ಣ ಜನ್ಮಾಷ್ಠಮಿ. ಇಂತಹ ಕೃಷ್ಣನಗರಿ ಉಡುಪಿಯಲ್ಲಿ ಇಂದು ಅತ್ಯಂತ ಸಂಭ್ರಮದಿಂದ ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಗುತ್ತಿದ್ದು, ವೇಷಧಾರಿಗಳು ವಿವಿಧ ಬಗೆಯ ವೇಷ ತೊಟ್ಟು ನಗರದಾದ್ಯಂತ ಸಂಚರಿಸಿ, ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡುತ್ತಿದ್ದಾರೆ. ಕಲೆ ಮತ್ತು ಸಂಸ್ಕೃತಿ ಉಳಿದಾಗ ಸಮಾಜದಲ್ಲಿ ಸಾಮರಸ್ಯದಿಂದ ಬದುಕಲು ಸಾಧ್ಯ ಎನ್ನುವುದಕ್ಕೆ ಈ ಹಬ್ಬ ದೊಡ್ಡ ಉದಾಹರಣೆ ಎಂದರು.
ಸರ್ವಧರ್ಮ – ಸಹಬಾಳ್ವೆಯ ಜೀವನಶೈಲಿ ಉಡುಪಿ ಜಿಲ್ಲೆಯ ಜನರಲ್ಲಿ ಕಾಣಬಹುದಾಗಿದೆ. ಭವಿಷ್ಯ ನಿರ್ಮಾಣದ ರೂವಾರಿಗಳಾಗಿರುವ ವಿದ್ಯಾರ್ಥಿಗಳು ಶ್ರೀಕೃಷ್ಣ ಭಗವದ್ಗೀತೆಯ ಮೂಲಕ ಸಾರಿರುವ ಸಂದೇಶಗಳನ್ನು ಜೀವನದಲ್ಲಿ ಅನುಸರಿಸುವುದರೊಂದಿಗೆ ಸನ್ಮಾರ್ಗದಲ್ಲಿ ನಡೆಯಬೇಕು. ಆಗ ಇಂತಹ ಮಹಾನ್ ಚೇತನರ ಜಯಂತಿ ಆಚರಣೆಯು ಅರ್ಥಪೂರ್ಣವಾಗುತ್ತದೆ ಎಂದರು.
ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ಶ್ರೀಕೃಷ್ಣನ ಜನ್ಮ ದಿನವನ್ನು ಇಂದು ಉಡುಪಿ ನಗರದಾದ್ಯಂತ ವೈಶಿಷ್ಟö್ಯ ಪೂರ್ಣವಾಗಿ ಆಚರಿಸಲಾಗುತ್ತಿದೆ. ದುಷ್ಟರನ್ನು ಶಿಕ್ಷಿಸಲು ಶಿಷ್ಠರ ರಕ್ಷಣೆಗಾಗಿ ಜನ್ಮ ತಾಳಿದವರು ಶ್ರೀಕೃಷ್ಣ. ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಪರವಾಗಿ ನಿಂತು ಧರ್ಮಕ್ಕೆ ಜಯತಂದು ಕೊಟ್ಟ ಆದರ್ಶ ಪುರುಷ ಶ್ರೀಕೃಷ್ಣ ದೇವರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ ಮಾತನಾಡಿ, ಮನುಷ್ಯನ ಜೀವನಕ್ಕೆ ಬೇಕಾದ ಎಲ್ಲ ಆದರ್ಶಗಳು, ಸಲಹೆ, ಮಾರ್ಗದರ್ಶನಗಳು ಭಗವದ್ಗೀತೆಯ ತಾತ್ಪರ್ಯದಲ್ಲಿವೆ. ಶ್ರೀಕೃಷ್ಣನು ಸಾವಿರಾರು ವರ್ಷಗಳ ಹಿಂದೆ ಭಗವದ್ಗೀತೆಯ ಮೂಲಕ ನೀಡಿದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದೆ. ಅದನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡಾಗ ಸಾರ್ಥಕತೆಯ ಭಾವ ನಮ್ಮಲ್ಲಿ ಕಾಣಬಹುದಾಗಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀಕಾಂತ್ ಸಿದ್ಧಾಪುರ ಉಪನ್ಯಾಸ ನೀಡಿ ಮಾತನಾಡುತ್ತಾ, ಧರ್ಮವನ್ನು ರಕ್ಷಿಸುವ ನಿಟ್ಟಿನಲ್ಲಿ ಭಗವಾನ್ ವಿಷ್ಣುವಿನ 8 ನೇ ಅವತಾರವಾಗಿರುವ ಕೃಷ್ಣನನ್ನು ದೇವರನ್ನಾಗಿ ಮಾತ್ರವಲ್ಲದೆ ಅವರು ಜೀವಿಸಿದ ಶೈಲಿಯನ್ನು ನೋಡಿ ಕಲಿಯಲು ಬಹಳಷ್ಟು ನಿದರ್ಶನಗಳಿವೆ. ಹಿಂದೂ ಧರ್ಮಿಯರು ಶ್ರೀ ಕೃಷ್ಣನನ್ನು ಆರಾಧಿಸುವ, ಪೂಜಿಸುವ ಸಂಪ್ರದಾಯವನ್ನು ಅನಾಧಿ ಕಾಲದಿಂದಲೂ ಪಾಲಿಸುತ್ತಾ ಬರುತ್ತಿದ್ದಾರೆ. ದೇಶ- ವಿದೇಶಗಳಲ್ಲಿಯೂ ಸಹ ಶ್ರೀಕೃಷ್ಣನ ಭಕ್ತರಿದ್ದಾರೆ. ಸಾವಿರಾರು ಗೋಪಿಕ ಸ್ತ್ರೀಯರಿಗೆ ರಕ್ಷಣೆ ನೀಡುವುದರೊಂದಿಗೆ, ಕುರುಕ್ಷೇತ್ರ ಯುದ್ಧದಲ್ಲಿ ಧರ್ಮದ ರಕ್ಷಣೆ ಮಾಡಲು ಶ್ರೀ ಕೃಷ್ಣ ಪರಮಾತ್ಮನು ತೆಗೆದುಕೊಂಡ ನಿರ್ಧಾರ ಸತ್ಯದ ದಾರಿಯಾಗಿದೆ. ಜಗತ್ತಿನಲ್ಲಿ ಅಧರ್ಮ ಹೆಚ್ಚಾದಾಗ ಎಲ್ಲಾ ಕಾಲಕ್ಕೂ ಸಂಭವಾಮಿ ಯುಗೇ ಯುಗೇ ಎಂದು ಹೇಳಿ ಧರ್ಮೋದ್ದಾರಕನಾಗಿ, ಜಗದೋದ್ಧಾರಕನಾಗಿ ಶ್ರೀಕೃಷ್ಣ ನಿಂತಿದ್ದಾರೆ. ಅವರು ಸಲಹೆಗಾರ, ತತ್ವಜ್ಞಾನಿ, ಯೋಗಿ, ಯೋಧ, ರಾಜತಾಂತ್ರಿಕ ಮತ್ತು ಮಾರ್ಗದರ್ಶಕ ಸೇರಿದಂತೆ ಬಹು ಪಾತ್ರಗಳಲ್ಲಿ ಯಶಸ್ವಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂದರು.
ಶ್ರೀಕೃಷ್ಣನ ಸಂದೇಶದಂತೆ ಸುಖ- ದುಃಖ, ನೋವು – ನಲಿವು, ಲಾಭ- ನಷ್ಟಗಳನ್ನು ಸಮಾನವಾಗಿ ಕಾಣಬೇಕು. ಮನಸ್ಸು ನಮ್ಮ ಸ್ಥಿತಿ ಪ್ರಜ್ಞೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿರಬೇಕು. ನಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳಲು ಸಮಯಕ್ಕೆ ಅನುಗುಣವಾಗಿ ಬದಲಾಗಬೇಕು. ಭಗವದ್ಗೀತೆಯ ವಿಚಾರಗಳು ನಮ್ಮ ಬದುಕನ್ನು ರೂಪಿಸುವ ಶಕ್ತಿಯಾಗಿದ್ದು, ಆ ಮೂಲಕ ನಮ್ಮಗಳ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿದೇಶಕ ಸುಬ್ರಹ್ಮಣ್ಯ ಶೆಟ್ಟಿ, ಶಾಲೆಯ ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಇಲಾಖೆಯ ಸಿಬ್ಬಂದಿ ವರ್ಷಾ ಬಿ ಕೋಟ್ಯಾನ್ ನಿರೂಪಿಸಿ, ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಕೆ. ಪೂರ್ಣಿಮಾ ವಂದಿಸಿದರು.
















