ಕುಂದಾಪ್ರ ಡಾಟ್ ಕಾಂ ಸುದ್ದಿ.
ಕತಾರ್: ಪೀಳಿಗೆಗಳನ್ನು ಮಂತ್ರಮುಗ್ಧಗೊಳಿಸಿದ, ಪ್ರತಿಯೊಬ್ಬರ ಹೃದಯಗಳಲ್ಲಿ ಸದಾ ಜೀವಂತವಾಗಿರುವ ಭಾರತದ ಗಾನ ಕೋಗಿಲೆ, ಗಾನ ಗಂಧರ್ವೆ ಶ್ರೀಮತಿ ಎಸ್. ಜಾನಕಿ ಅವರ ಸವಿನೆನಪಿಗಾಗಿ ಭಾರತೀಯ ಸಾಂಸ್ಕೃತಿಕ ಕೇಂದ್ರ (ಐಸಿಸಿ) ಕತಾರ್, ಭಾರತೀಯ ರಾಯಭಾರ ಕಚೇರಿಯ ಸಹಯೋಗದೊಂದಿಗೆ ಅಶೋಕ ಸಭಾಂಗಣದಲ್ಲಿ ‘ಜಾನಕಿ ಸ್ಮೃತಿ’ ಎಂಬ ಅದ್ದೂರಿ ಸಂಗೀತ ಸಂಜೆಯನ್ನು ಆಯೋಜಿಸಲಾಗಿತ್ತು.
ಈ ವಿಶೇಷ ಕಾರ್ಯಕ್ರಮದಲ್ಲಿ ಕತಾರ್ನ ಪ್ರಮುಖ ಕನ್ನಡ ಸಂಘಟನೆಯಾದ ಕರ್ನಾಟಕ ಸಂಘ ಕತಾರ್ ಅತ್ಯಂತ ಸಕ್ರಿಯವಾಗಿ ಭಾಗವಹಿಸಿ ಗಮನ ಸೆಳೆಯಿತು. ಭಾರತದ ನಾನಾ ಭಾಷೆಗಳಲ್ಲಿ ಗಾನಸುಧೆ ಹರಿಸಿದ್ದ ಎಸ್. ಜಾನಕಿ ಅವರ ಅಮರ ಗೀತೆಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳ ಜನಪ್ರಿಯ ಹಾಡುಗಳನ್ನು ಗಾಯಕರು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ಸಂಘ ಕತಾರ್ನ ಸದಸ್ಯರು ಮತ್ತು ಪ್ರತಿಭಾವಂತ ಗಾಯಕರು ಎಸ್. ಜಾನಕಿ ಅವರು ಹಾಡಿದ ಸದಾಹಸಿರು ಕನ್ನಡ ಗೀತೆಗಳ ಮಧುರ ಗಾಯನದ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಸಭಾಂಗಣದಲ್ಲಿದ್ದ ಸಂಗೀತ ಪ್ರೇಮಿಗಳು ಕನ್ನಡಿಗರ ಈ ಗಾನ ವೈಭವಕ್ಕೆ ಕರತಾಡನದ ಮೂಲಕ ಅಭಿನಂದನೆ ಸಲ್ಲಿಸಿದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಐಸಿಸಿ ಅಧ್ಯಕ್ಷರಾದ ಎ.ಪಿ. ಮಣಿಕಂಠನ್ ಅವರು, ಭಾರತೀಯ ಚಿತ್ರರಂಗಕ್ಕೆ ಮತ್ತು ಸಂಗೀತ ಕ್ಷೇತ್ರಕ್ಕೆ ಎಸ್. ಜಾನಕಿ ಅವರು ನೀಡಿರುವ ಅಪಾರ ಕೊಡುಗೆಯನ್ನು ಸ್ಮರಿಸಿದರು. ಅವರ ಅದ್ಭುತ ಧ್ವನಿ ಸೌಂದರ್ಯ ಹಾಗೂ ಗಾಯನ ಶೈಲಿ ದೇಶದ ಲಕ್ಷಾಂತರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಶಾಶ್ವತವಾಗಿ ಉಳಿದಿದೆ ಎಂದು ಬಣ್ಣಿಸಿದರು.
ಈ ಸ್ಮರಣೀಯ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘ ಕತಾರ್ ಅಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು, ಸಂಘದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಹಾಗೂ ಕತಾರ್‌ನ ಭಾರತೀಯ ಸಮುದಾಯದ ಪ್ರಮುಖ ಗಣ್ಯರು ಭಾಗವಹಿಸಿ ಗಾನ ಕೋಗಿಲೆಯ ಸವಿನೆನಪಿನ ಸುಮುಧುರ ಸಂಗೀತ ಸಂಜೆಗೆ ಸಾಕ್ಷಿಯಾದರು.
















