ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ 75 ಮೀ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡಕ್ಕೆ ಪರವಾನಿಗೆ ನೀಡುವ ವಿಚಾರದಲ್ಲಿ ಆಗಿರುವ ಗೊಂದಲದ ಕುರಿತು ಉಪ್ಪುಂದ ಕೆಆರ್ ಎಸ್ ಎಸ್ ಸಭಾಂಗಣದಲ್ಲಿ ಸಂತ್ರಸ್ತರ ಸಭೆ ನಡೆಯಿತು.
ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ರಾಜ್ಯ ಸರಕಾರ ಜಾರಿಗೆ ತರಬಾರದು ಹಾಗೂ ಕರಾವಳಿ ಜಿಲ್ಲೆಗಳಿಗೆ ವಿಶೇಷ ವಿನಾಯತಿ ನೀಡಬೇಕೆಂದು ಒಕ್ಕೊರಲ ಬೇಡಿಕೆ ಮಂಡಿಸಲಾಯಿತು. ಒಂದು ವೇಳೆ ಈ ಆದೇಶ ಜಾರಿಗೆ ಬಂದಲ್ಲಿ ಕರಾವಳಿ ಜಿಲ್ಲೆಗಳ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ವ್ಯಾಪಾರ ವ್ಯವಹಾರ, ಪ್ರಸೋದ್ಯಮಗಳಿಗೆ ಭಾರಿ ಹೊಡೆತ ಬೀಳಲಿದ್ದು ಈಗಾಗಲೇ ಭೂಸ್ವಾಧೀನ ಆಗಿರುವ ಜಮೀನಿಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯ ಮಧ್ಯದಿಂದ 75ಮೀ ಅಂತರದೊಳಗೆ ಇರುವ ಜಮೀನುಗಳು, ವಾಣಿಜ್ಯ ಮಳಿಗೆಗಳು, ಇತರೇ ಅಂಗಡಿ ಮುಂಗಟ್ಟುಗಳು ಬೆಲೆ ಕಳೆದುಕೊಂಡು ಸಂಬಂಧಪಟ್ಟ ಮಾಲೀಕರು ಸಂತ್ರಸ್ತರಾಗಲಿದ್ದಾರೆ. ಹಾಗಾಗಿ ಈ ಕುರಿತು ರಾಜ್ಯ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟು, ಸುಪ್ರೀಂ ಕೋರ್ಟಗೆ ಮೇಲ್ಮನವಿ ಸಲ್ಲಿಸುವಂತೆ ಒತ್ತಾಯಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು..
ಇದೇ ಸಮಯದಲ್ಲಿ ಬೈಂದೂರು ತಾಲೂಕು ರಾಷ್ಟ್ರೀಯ ಹೆದ್ದಾರಿ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಉಪಾಧ್ಯಕ್ಷರಾಗಿ ಮಂಗೇಶ ಶ್ಯಾನುಭಾಗ್, ಪ್ರಧಾನ ಕಾರ್ಯದರ್ಶಿಯಾಗಿ ಡಾ. ಸುಬ್ರಮಣ್ಯ ಭಟ್, ಸಂಘಟನಾ ಕಾರ್ಯದರ್ಶಿಯಾಗಿ ಬಾಲಕೃಷ್ಣ ಪ್ರಭು, ಸುನಿಲ್ ಪೂಜಾರಿ ಹಾಗೂ ಕಾರ್ಯದರ್ಶಿಯಾಗಿ ರಾಜು ಬಿ.ಡಿ. ಅರೆಹೊಳೆ ಹಾಗೂ ಚಂದ್ರ ಪೂಜಾರಿ ಉಪ್ಪುಂದ ಮತ್ತು 20 ಜನರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.











