ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಆರುಣ್ಯ 2026ರ ಸಮಾರೋಪ ಸಮಾರಂಭ ಕಾಲೇಜಿನಲ್ಲಿ ನೆರವೇರಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉದ್ಯಮಿ ಜಯಸೂರ್ಯ ಪೂಜಾರಿ ಮಾತನಾಡಿ, ವಿದ್ಯಾರ್ಥಿ ಜೀವನವು ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಅತ್ಯಂತ ಮಹತ್ವದ ಹಂತವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಯಾವುದಾದರೂ ಒಂದು ವಿಶಿಷ್ಟ ಪ್ರತಿಭೆ, ಸಾಮರ್ಥ್ಯ ಮತ್ತು ಸೃಜನಶೀಲತೆ ಅಡಗಿರುತ್ತದೆ. ಆ ಪ್ರತಿಭೆ ಗುರುತಿಸಿ ಬೆಳೆಸಲು ಸೂಕ್ತವಾದ ಅವಕಾಶ ದೊರೆತಾಗ ಮಾತ್ರ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವನ್ನು ಬೆಳೆಸಿಕೊಂಡು, ಭವಿಷ್ಯದಲ್ಲಿ ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಬಹುದು ಎಂದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ದಯಾನಂದ ಎನ್. ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಯಶಸ್ಸಾಗಿ ಪರಿವರ್ತಿಸಲು ಅವಕಾಶ, ಮಾರ್ಗದರ್ಶನ ಮತ್ತು ಪರಿಶ್ರಮ ಅಗತ್ಯ. ಆದ್ದರಿಂದ ಇಂದಿನ ಕಾರ್ಯಕ್ರಮ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆಗಳನ್ನು ಒದಗಿಸಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಆರುಣ್ಯ 2026ರ ಕಾರ್ಯಕ್ರಮದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಗುರುಕುಲ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರೆ ದ್ವಿತೀಯ ಸ್ಥಾನವನ್ನು ವೆಂಕಟರಮಣ ಪದವಿ ಪೂರ್ವ ಕಾಲೇಜು ತಮ್ಮದಾಗಿಸಿಕೊಂಡಿದೆ.
ಕಾಲೇಜಿನ ಆಡಳಿತಾಧಿಕಾರಿ ಡಾ. ಮೋಹನ್ ಕೆ.ಎನ್. ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಡಾ. ರವಿಚಂದ್ರ ಧನ್ಯವಾದ ಗೈದರು. ಉಪನ್ಯಾಸಕ ಅಕ್ಷಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
















