ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಯುವ ಜನತೆ ಮತ್ತು ನಾಗರಿಕರಲ್ಲಿ ಸಂವಿಧಾನದ ಹಕ್ಕು, ಕರ್ತವ್ಯಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಅರಿವು ಮೂಡಿಸಲು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಸಂವಿಧಾನದ ಮೌಲ್ಯಗಳ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಇದ್ದಾಗ ಮಾತ್ರ ಶಿಸ್ತು ಬದ್ಧ ಜೀವನ ನಡೆಸಲು ಸಾಧ್ಯ ಎಂದು ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಸಿದ್ದಪ್ಪ ಗಂಗಣ್ಣನವರ್ ಹೇಳಿದರು.
ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆ, ಕಾನೂನು ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಡುಪಿ ಇವರ ಸಹಭಾಗಿತ್ವದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಯುವ ಸಂಸತ್ತು – ಕಾರ್ಯಕ್ರಮವನ್ನು ಉದ್ಘಾಟಿಸಿ, ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಸಂವಿಧಾನವು ದೇಶದ ಪ್ರತೀ ಪ್ರಜೆಗೂ ಸ್ವತಂತ್ರವಾಗಿ ಜೀವಿಸಲು ಅವಕಾಶ ಮಾಡಿಕೊಟ್ಟಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು, ಮಾನವ ಹಕ್ಕುಗಳನ್ನು ಉತ್ತೇಜಿಸಲು ಮತ್ತು ಸಾರ್ವಜನಿಕರ ಭಾಗವಹಿಸುವಿಕೆಯನ್ನು ಬಲಪಡಿಸಲು ಪ್ರತೀ ವರ್ಷ ಸೆಪ್ಟಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು, ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನಕ್ಕೆ ಬದ್ಧವಾಗಿ ಜೀವನ ನಡೆಸಬೇಕು ಎಂದರು.
ಸಂಸತ್ತು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ. ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಿರುವಂತಹ ಕೆಲವೇ ಕೆಲವು ರಾಷ್ಟçಗಳಲ್ಲಿ ಭಾರತವೂ ಒಂದು. ಭಾರತದ ಭೂವಿಸ್ತಾರಗಳನ್ನು ಗಮನಿಸಿದಾಗ ದೇಶದ ಜನಸಂಖ್ಯೆ, ಸಂಸ್ಕೃತಿ, ಸಾಮಾಜಿಕ ವೈವಿಧ್ಯತೆಗಳು, ವಿಚಾರಗಳಲ್ಲಿ ಸ್ವಾಮ್ಯತೆಯನ್ನು ಕಾಣಬಹುದಾಗಿದೆ. ವ್ಯಕ್ತಿಗಳಲ್ಲಿ ಕೆಲವರು ಒಳ್ಳೆಯರು ಕೆಟ್ಟವರು ಇರುವ ಹಾಗೆಯೇ ದೇಶದ ಜೀವನದ ಹಾದಿಯಲ್ಲಿ ಏರುಪೇರುಗಳು ಇವೆ. ಸಂವಿಧಾನವನ್ನು ಅಂಗೀಕರಿಸುವ ಮೊದಲು ಅನೇಕ ಮಹನೀಯರುಗಳು ತಮ್ಮ ವಿಚಾರಧಾರೆಗಳನ್ನು ಮಂಡಿಸಿದ್ದಾರೆ. ಅವುಗಳನ್ನು ಅರಿತಷ್ಟು ನಮ್ಮ ಸಂವಿಧಾನದ ವೈಚಾರಿಕತೆಯ ಆಳ ನಮ್ಮ ಅರಿವಿಗೆ ಬರುತ್ತದೆ ಎಂದರು.
ಮಕ್ಕಳು ಪ್ರಜಾಪ್ರಭುತ್ವದ ಬಗ್ಗೆ ತಿಳಿದುಕೊಂಡು ಅದರ ಕಾರ್ಯಕ್ಷಮತೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಲು ಯುವ ಸಂಸತ್ತು ಕಾರ್ಯಕ್ರಮ ಒಂದು ಉತ್ತಮ ವೇದಿಕೆಯಾಗಿದೆ. ಯುವ ಸಂಸತ್ತು ಸಭೆಗಳು ಜಿಲ್ಲೆಯಲ್ಲಿ ಸುಮಾರು ಎರಡುವರೆ ತಿಂಗಳುಗಳ ಕಾಲ ನಡೆಯಲಿದ್ದು, ಶಾಲಾ-ಕಾಲೇಜುಗಳಲ್ಲಿ ಉತ್ತಮ ವಾಕ್ ಚಾತುರ್ಯವುಳ್ಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ತಿಳಿಸಿದ ಅವರು, ಸಂಸತ್ತಿಗೆ ತನ್ನದೇ ಆದ ಪಾವಿತ್ರö್ಯತೆ, ಪ್ರಾಮುಖ್ಯತೆ ಇದ್ದು, ವಿದ್ಯಾರ್ಥಿಗಳು ಅದನ್ನರಿತು, ಅದರ ಮೌಲ್ಯಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ರೂಢಿಸಿಕೊಂಡು, ಉತ್ತಮ ನಾಗರೀಕರಾಗಿ ದೇಶ, ರಾಜ್ಯ ಹಾಗೂ ಸಮಾಜವನ್ನು ಮುನ್ನಡೆಸುವ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಶಾಸಕ ಯಶ್‌ಪಾಲ್ ಎ ಸುವರ್ಣ ಮಾತನಾಡಿ, ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ನಮ್ಮದು. 1.4 ಕೋಟಿ ಗೂ ಹೆಚ್ಚು ಜನರಿದ್ದರೂ ಸಹ ನೆಮ್ಮದಿಯ ಜೀವನ ನಡೆಸಲು ಸಂವಿಧಾನದಲ್ಲಿರುವ ಮೂಲ ಅಂಶಗಳೇ ಕಾರಣ. ವಿಶ್ವದಲ್ಲಿಯೇ ಅತೀ ಹೆಚ್ಚು ಯುವ ಸಂಪತ್ತು ಹೊಂದಿರುವ ನಮ್ಮ ದೇಶದ ಯುವಜನತೆಯಲ್ಲಿ ಸಂವಿಧಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ, ನಾಯಕತ್ವ ಗುಣಗಳನ್ನು ವಿದ್ಯಾರ್ಥಿ ಜೀವನದಲ್ಲಿಯೇ ರೂಢಿಸಿಕೊಳ್ಳುವಂತೆ ಪ್ರೇರೇಪಿಸುವುದರೊಂದಿಗೆ ದೇಶ ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು ಎಂದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಮಾತನಾಡಿ, ದೇಶದ ಪ್ರತಿಯೊಬ್ಬ ನಾಗರಿಕರಲ್ಲಿಯೂ ಪ್ರೀತಿ, ವಿಶ್ವಾಸ ಬೆಳೆಸುವ ಕೆಲಸ ಮಾಡಿದಾಗ ಪ್ರಜಾಪ್ರಭುತ್ವದ ಆಶಯಗಳು ಯಶಸ್ವಿಯಾಗುತ್ತದೆ. ಪ್ರತಿಯೊಬ್ಬ ಅರ್ಹರಿಗೂ ಮತದಾನದ ಹಕ್ಕನ್ನು ಪ್ರಜಾಪ್ರಭುತ್ವ ಕಲ್ಪಿಸಿದೆ. ಯುವಜನತೆ ನಮ್ಮ ದೇಶದ ಆಸ್ತಿ. ದೇಶದ ಅಭಿವೃದ್ಧಿಗೆ ಶ್ರಮಿಸುವ ಜನನಾಯಕನನ್ನು ಆಯ್ಕೆ ಮಾಡುವ ಸ್ವಾತಂತ್ರö್ಯ ಅವರುಗಳಿಗೆ ನೀಡಿದೆ ಎಂದ ಅವರು, ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದರೊಂದಿಗೆ ಸತ್ಪçಜೆಗಳಾಗಿ ಬಾಳಬೇಕು ಎಂದರು.
ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಬಾಳು – ಸರ್ವರಿಗೂ ಸಮಪಾಲು ನೀಡಿದಾಗ ಮಾತ್ರ ಪ್ರಜಾಪ್ರಭುತ್ವದ ಸುಂದರತೆಯ ಅರಿವು ನಮಗಾಗುತ್ತದೆ. ಸಂವಿಧಾನಾತ್ಮಕವಾಗಿ ನಡೆಯುವ ಕಾನೂನು ಆಡಳಿತಗಳು ಸಮಾಜದ ಕಟ್ಟಕಡೆಯ ಜನರಿಗೂ ತಲುಪಬೇಕು ಎಂದ ಅವರು, ಯುವಕರಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಸಂಸದೀಯ ವ್ಯವಸ್ಥೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಯುವ ಸಂಸತ್ತು ಸಭೆಗಳನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಆಚರಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸಂವಿಧಾನದ ಪೀಠಿಕೆ ಬೋಧಿಸಿ ಮಾತನಾಡಿ, ಕಳೆದ ಎರಡು-ಮೂರು ವರ್ಷಗಳಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ವಿನೂತನ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಶಾಲಾ-ಕಾಲೇಜು ಮಕ್ಕಳಿಗೆ ಯುವ ಸಂಸತ್ತು ಸಭೆಗಳನ್ನು ಆಯೋಜಿಸಿ ಪ್ರಜಾಪ್ರಭುತ್ವ ಚಲನಶೀಲತೆಯನ್ನು ಮತ್ತಷ್ಟು ವಿಸ್ತರಿಸುವ ಹಾಗೂ ಯುವ ಸಮುದಾಯಕ್ಕೆ ದೇಶದ ಸಂಸದೀಯ ವ್ಯವಸ್ಥೆಯನ್ನು ಪರಿಚಯಿಸುವ ಉದ್ದೇಶ ಈ ಸಭೆಗಳ ಮೂಲಕ ಮಾಡಲಾಗುತ್ತಿದೆ ಎಂದರು.
ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರವೀಣ ಮೊಗವೀರ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಯುವ ಸಂಸತ್ತು ಕಾರ್ಯಕ್ರಮದ ಪೋಸ್ಟರ್ ಅನ್ನು ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಎಎಸ್‌ಪಿ ಸುಧಾಕರ್ ನಾಯಕ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅನಿತಾ ಮಡ್ಲೂರು ಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿ, ವಂದಿಸಿದರು.
















