ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಗಣೇಶ ಚತುರ್ಥಿಯನ್ನು ಭಕ್ತಿ ಹಾಗೂ ಸಡಗರದಿಂದ ಆಚರಿಸಲಾಯಿತು.
ಶಾಲೆಯ ಹಟ್ಟಿಯಂಗಡಿ ಶಾಂತಾರಾಮ ವೇದಿಕೆಯಲ್ಲಿ ಶ್ರೀ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.
ವಿದ್ಯಾರ್ಥಿಗಳು ಗಣೇಶನ ಮಹಿಮೆಯನ್ನು ಸಾರುವ ಭಕ್ತಿಗೀತೆಗಳನ್ನು ಹಾಡಿದರು. ಈ ಸಂದರ್ಭದಲ್ಲಿ ಸಂಸ್ಕೃತ ಶಿಕ್ಷಕ ರಾಮಕೃಷ್ಣ ಉಡುಪ ಅವರು ಗಣೇಶ ಚತುರ್ಥಿಯ ಮಹತ್ವವನ್ನು ತಿಳಿಸಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ಜೀವನದ ಯಶಸ್ಸಿಗಾಗಿ ಶ್ರೀ ಗಣೇಶನಲ್ಲಿ ಪ್ರಾರ್ಥಿಸುವಂತೆ ಕರೆ ನೀಡಿದರು.
ನಂತರ ವಿದ್ಯಾರ್ಥಿಗಳಿಗಾಗಿ ಮೊಸರು ಕುಡಿಕೆ, ಮೆಹಂದಿ, ರಂಗೋಲಿ ಹಾಗೂ ವಿವಿಧ ಮೋಜಿನ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು.
ಅಪರಾಹ್ನ ಶ್ರೀ ಗಣೇಶನ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಶಾಲಾ ಬಾವಿಯಲ್ಲಿ ಭಕ್ತಿಪೂರ್ವಕವಾಗಿ ವಿಸರ್ಜಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ, ಆಡಳಿತಾಧಿಕಾರಿ ವೀಣಾ ರಶ್ಮಿ ಎಂ., ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಹಾಗೂ ಶೈಕ್ಷಣಿಕ ಸಲಹೆಗಾರರಾದ ಸುಜಾತ ಸದಾರಾಮ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು
















