ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯ ಸಹಯೋಗದಲ್ಲಿ ಆಲೂರಿನ ಖ್ಯಾತ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯವು ಚಿತ್ರಕೂಟ ಆಯುರ್ವೇದ ಹಬ್ಬ ಮತ್ತು ಜೆನ್ ಜೀ ಆಯುರ್ವೇದ ಜಾಗೃತಿ ಅಭಿಯಾನ ಆಯೋಜಿಸುತ್ತಿದ್ದು, ಅದರ ಅಂಗವಾಗಿ ಉಡುಪಿ ಜಿಲ್ಲಾ ಶಾಲಾ ಮಟ್ಟದ ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಭಾಷಣ, ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಗಳು 2026ರ ಅಕ್ಟೋಬರ್ 4ರ ಭಾನುವಾರ ಬೆಳಿಗ್ಗೆ 9:00 ಗಂಟೆಯಿಂದ ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಆವರಣದಲ್ಲಿ ನಡೆಯಲಿವೆ.
ಈ ಸ್ಪರ್ಧೆಗಳು ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗಾಗಿ ನಡೆಯಲಿದ್ದು, ಒಂದರಿಂದ ನಾಲ್ಕನೇ ತರಗತಿಯ ಪುಟಾಣಿ ಮಕ್ಕಳಿಗಾಗಿ ಪ್ರಕೃತಿ ಮತ್ತು ಆಯುರ್ವೇದ ಎಂಬ ವಿಷಯದ ಮೇಲೆ ಒಂದು ಗಂಟೆಯ ಕಾಲಾವಕಾಶದ ಚಿತ್ರಕಲೆ ಸ್ಪರ್ಧೆ ನಡೆಯಲಿದೆ. ಐದರಿಂದ ಏಳನೇ ತರಗತಿ ಹಾಗೂ ಎಂಟರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳನ್ನು ನಿಗದಿಪಡಿಸಲಾಗಿದೆ. ಭಾಷಣ ಸ್ಪರ್ಧೆಗೆ ಪ್ರಸ್ತುತ ಕಾಲಘಟ್ಟದಲ್ಲಿ ಆಯುರ್ವೇದದ ಮಹತ್ವ ಎಂಬ ವಿಷಯವಿದ್ದು, ಪ್ರತಿ ಸ್ಪರ್ಧಿಗೆ ನಾಲ್ಕು ನಿಮಿಷಗಳ ಕಾಲಾವಕಾಶ (3+1 ನಿಮಿಷ) ಕಲ್ಪಿಸಲಾಗಿದೆ. ಹಾಗೆಯೇ ವಿದ್ಯಾರ್ಥಿಗಳ ವೈಚಾರಿಕ ಚಿಂತನೆಗಳನ್ನು ಒಳಗೊಂಡ ಪ್ರಬಂಧ ಸ್ಪರ್ಧೆಗೆ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಸಾಂಪ್ರದಾಯಿಕ ಆಹಾರ ಮತ್ತು ಆಯುರ್ವೇದದ ಪಾತ್ರ ಎಂಬ ವಿಷಯವನ್ನು ನೀಡಲಾಗಿದ್ದು, ಇದಕ್ಕಾಗಿ ಒಂದು ಗಂಟೆಯ ಕಾಲಾವಕಾಶ ನಿಗದಿಪಡಿಸಲಾಗಿದೆ.
ಪ್ರಸ್ತುತ ಕಾಲಘಟ್ಟದಲ್ಲಿ ಯುವಪೀಳಿಗೆಗೆ ನಮ್ಮ ಪ್ರಾಚೀನ ಚಿಕಿತ್ಸಾ ಜ್ಞಾನ ಮತ್ತು ನಿಸರ್ಗದ ನಂಟನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ಕುರಿತು ಮಾತನಾಡಿದ ಚಿತ್ರಕೂಟ ಸಂಸ್ಥೆಯ ಮುಖ್ಯಸ್ಥರಾದ ಡಾ. ರಾಜೇಶ್ ಬಾಯರಿ ಅವರು, “ಆಯುರ್ವೇದವೆಂದರೆ ಕೇವಲ ಕಾಯಿಲೆ ಬಂದಾಗ ಕುಡಿಯುವ ಕಹಿ ಕಷಾಯವಲ್ಲ ಅಥವಾ ವಯಸ್ಸಾದವರು ಅನುಸರಿಸುವ ಕಠಿಣ ಪಥ್ಯವೂ ಅಲ್ಲ. ಬದಲಿಗೆ ಆಯುರ್ವೇದ ಹಿರಿಯರು ಕಿರಿಯರೆನ್ನದೆ ಎಲ್ಲರೂ ಪಾಲಿಸಬಹುದಾದ ಜೀವನಕ್ರಮ. ಇಂದಿನ ಡಿಜಿಟಲ್ ಯುಗದಲ್ಲಿ ಪ್ರಕೃತಿಯಿಂದ ವಿಮುಖರಾಗಿರುವ ಎಳೆಯ ಪೀಳಿಗೆಗೆ ಮಣ್ಣಿನ ಪರಿಮಳ, ಶುದ್ಧ ಗಾಳಿ ಮತ್ತು ದೇಸಿ ಆಹಾರದ ಮಹತ್ವವನ್ನು ಬಾಲ್ಯದಲ್ಲೇ ಮನದಟ್ಟು ಮಾಡುವುದು ಇಂದಿನ ಅನಿವಾರ್ಯ ಕರ್ತವ್ಯವಾಗಿದೆ. ನಮ್ಮ ಪೂರ್ವಜರ ನೈಸರ್ಗಿಕ ದಿನಚರಿ ಮತ್ತು ಆಯುರ್ವೇದ ಜೀವನಪದ್ಧತಿಯನ್ನು ಮಕ್ಕಳಲ್ಲಿ ವೈಜ್ಞಾನಿಕವಾಗಿ ಜಾಗೃತಗೊಳಿಸಲೆಂದೇ ಈ ವೇದಿಕೆಯನ್ನು ರೂಪಿಸಲಾಗಿದೆ” ಎಂದು ತಿಳಿಸಿದ್ದಾರೆ.
ಪ್ರತಿಭಾನ್ವಿತ ಸ್ಪರ್ಧಿಗಳಿಗೆ ಆಕರ್ಷಕ ನಗದು ಪುರಸ್ಕಾರಗಳನ್ನು ಘೋಷಿಸಲಾಗಿದ್ದು, ವಿಜೇತರಿಗೆ ಪ್ರಥಮ ಬಹುಮಾನವಾಗಿ 3,000 ರೂಪಾಯಿ, ದ್ವಿತೀಯ ಬಹುಮಾನವಾಗಿ 2,000 ರೂಪಾಯಿ ಹಾಗೂ ತೃತೀಯ ಬಹುಮಾನವಾಗಿ 1,000 ರೂಪಾಯಿ ನಗದು ನೀಡಿ ಪುರಸ್ಕರಿಸಲಾಗುವುದು. ಒಂದು ವಿಭಾಗದಲ್ಲಿ ಒಂದು ಶಾಲೆಯ ಒಬ್ಬ ವಿದ್ಯಾರ್ಥಿ ಮಾತ್ರ ಸ್ಪರ್ಧಿಸಬಹುದಾಗಿದೆ. ಇದರೊಂದಿಗೆ ಜೆನ್ ಜೀ ಆಯುರ್ವೇದ ರೀಲ್ಸ್ ಸ್ಪರ್ಧೆ ಕೂಡ ಆಯೋಜಿಸಲಾಗಿದೆ. ಈ ಸ್ಪರ್ಧೆಗಳ ಕುರಿತ ಹೆಚ್ಚಿನ ವಿವರ ಹಾಗೂ ನೋಂದಣಿಗಾಗಿ +91 91874 71578 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
















