ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸೈಂಟ್ ಥಾಮಸ್ ಶಾಲೆಯಲ್ಲಿ ಹಿಂದಿ ದಿವಸ್ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಹಿಂದಿ ಭಾಷೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರ ಜೊತೆಗೆ, ರಾಷ್ಟ್ರಾಭಿಮಾನ, ರಾಷ್ಟ್ರೀಯ ಏಕತೆ ಮತ್ತು ದೇಶಪ್ರೇಮದ ಭಾವನೆಗಳನ್ನು ಬೆಳೆಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ಫಿಲಿಪ್ ನೆಲ್ಲಿವಿಳಾ ಅವರು ವಹಿಸಿದ್ದರು. ಉಪ ಪ್ರಾಂಶುಪಾಲರು ಸಿಸ್ಟರ್ ಕಾರ್ಮೆಲ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಹಿಂದಿ ದಿವಸದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ವಿವಿಧ ಹಿಂದಿ ಭಾಷಾ ಚಟುವಟಿಕೆಗಳು, ಭಾಷಣ, ಕವನ ವಾಚನ, ದೇಶಭಕ್ತಿಗೀತೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ವಿಶೇಷವಾಗಿ ದೇಶದ ಏಕತೆ, ವೈವಿಧ್ಯತೆಯಲ್ಲಿ ಏಕತೆ ಮತ್ತು ದೇಶದ ಮೇಲಿನ ಪ್ರೀತಿಯನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳ ಸಾಧನೆಯನ್ನು ಪ್ರೋತ್ಸಾಹಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಲಾಯಿತು.
ಹಿಂದಿ ಕೇವಲ ಒಂದು ಭಾಷೆಯಲ್ಲ; ಅದು ದೇಶದ ವಿವಿಧ ಭಾಗಗಳ ಜನರನ್ನು ಪರಸ್ಪರ ಸಂಪರ್ಕಿಸುವ ಸೇತುವೆಯಂತಿದೆ. ಭಾಷೆಯ ಮೇಲಿನ ಗೌರವದೊಂದಿಗೆ ದೇಶದ ಸಂವಿಧಾನ, ಸಂಸ್ಕೃತಿ, ಪರಂಪರೆ ಮತ್ತು ರಾಷ್ಟ್ರದ ಮೇಲಿನ ಜವಾಬ್ದಾರಿಯ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂಬ ಸಂದೇಶವನ್ನು ಕಾರ್ಯಕ್ರಮ ಸಾರಿತು.
“ಭಾಷೆಯ ಗೌರವದೊಂದಿಗೆ ದೇಶದ ಗೌರವವೂ ನಮ್ಮೆಲ್ಲರ ಹೊಣೆ. ರಾಷ್ಟ್ರಾಭಿಮಾನವು ಪ್ರತಿಯೊಬ್ಬ ವಿದ್ಯಾರ್ಥಿಯ ಹೃದಯದಲ್ಲಿ ಬೆಳೆಯಬೇಕು” ಎಂಬ ಆಶಯದೊಂದಿಗೆ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು. ಹಿಂದಿ ಭಾಷಾಶಿಕ್ಷಕರ ಸಲಹೆ ಮೇರೆಗೆ ನಡೆದ ಈ ಹಿಂದಿ ದಿವಸ್ ಆಚರಣೆಯು ವಿದ್ಯಾರ್ಥಿಗಳಲ್ಲಿ ಭಾಷಾಭಿಮಾನ, ರಾಷ್ಟ್ರಾಭಿಮಾನ ಹಾಗೂ ರಾಷ್ಟ್ರೀಯ ಏಕತೆಯ ಭಾವನೆಯನ್ನು ಬೆಳೆಸುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಶಿಕ್ಷಕರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾ ರ್ಥಿಗಳಾದ ಸಮೃದ್ಧಿ, ಆಯಿಷಾ ಸಮ್ರಾ ನಿರೂಪಿಸಿ, ವಂದಿಸಿದರು.
















