ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಸ್ತುವಿಗಿಂತ ಪ್ರೀತಿ ಮುಖ್ಯ ಎನ್ನುವುದರ ಜೊತೆಗೆ ವಸ್ತುಗಳಿಗೆ ನೀಡಿದ ಆಕಾರ, ಅದರ ಗುರಿ ತಲುಪುವಲ್ಲಿ ಸಹಾಯವಾಗುತ್ತದೆ ಎನ್ನುವುದನ್ನು ಶ್ರೀಕೃಷ್ಣ ಹೇಳಿದ. ಹೀಗಾಗಿ ವಿದ್ಯಾರ್ಥಿಗಳು ಶ್ರೀಕೃಷ್ಣನ ಬದುಕಿನ ತತ್ವಗಳನ್ನು ಅರ್ಥೈಸಿಕೊಳ್ಳುವ ಮೂಲಕ ಸರಿಯಾದ ಜೀವನವನ್ನು ರೂಪಿಸಿಕೊಳ್ಳಿ ಎಂದು ಉಡುಪಿಯ ಶ್ರೀಕೃಷ್ಣ ಮಠದ ದಿವಾನರಾದ ಡಾ. ಉದಯ್ ಕುಮಾರ್ ಸರಳತ್ತಾಯ ಹೇಳಿದರು.
ಅವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಮತ್ತು ಗಣಕ ವಿಜ್ಞಾನ ವಿಭಾಗದ ಜಂಟಿಯಾಗಿ ಆಯೋಜಿಸಿದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮಹೇಶ್ ಕುಮಾರ್, ಕಾರ್ಯಕ್ರಮ ಸಂಯೋಜಕರಾದ ರೇಷ್ಮಾ ಶೆಟ್ಟಿ, ರಶ್ಮಿ ಗಾವಡಿ, ಮೇಘಾ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮೊಸರು ಕುಡಿಕೆ ಸ್ಪರ್ಧೆ ನಡೆಯಿತು.
















