ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ರೋವರ್ ಸ್ಕೌಟ್ಸ್ ಮತ್ತು ರೇಂಜರ್ ಗೈಡ್ಸ್ ಘಟಕದ ವತಿಯಿಂದ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಉಡುಪಿ ಮತ್ತು ಶಿವಮೊಗ್ಗ ಇವರ ಸಹಯೋಗದೊಂದಿಗೆ ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಇಂದ್ರಾಳಿ ಜಯಕರ್ ಶೆಟ್ಟಿ ಅವರ ಸೂಚನೆ ಹಾಗೂ ರೈಲ್ವೆ ಇಲಾಖೆಯ ಮಾರ್ಗದರ್ಶನದಂತೆ ಗುರುವಾರ ಬೆಳಿಗ್ಗೆ, ಈ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉಡುಪಿ ವಿಭಾಗದ ರೈಲ್ವೆ ಅಧಿಕಾರಿ ಶಾಲಿನಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಆನಂದ್ ಬಿ. ಆಡಿಗ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನ್ ಶೇಖರ್, ಐಎಂಜೆ ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಯೋಗೇಶ್ ಡಿ. ಮೇಸ್ತ ಹಾಗೂ ರೇಂಜರ್ ಲೀಡರ್ ಪ್ರಶೀಮಾ ಪಿ. ಉಪಸ್ಥಿತರಿದ್ದರು.
ಐಎಂಜೆ ಕಾಲೇಜಿನ 40ಕ್ಕೂ ಅಧಿಕ ರೋವರ್ ಮತ್ತು ರೇಂಜರ್ ವಿದ್ಯಾರ್ಥಿಗಳು ರೈಲ್ವೆ ಸಿಬ್ಬಂದಿಯ ಸಹಕಾರದೊಂದಿಗೆ ನಿಲ್ದಾಣದ ಪ್ಲಾಟ್‌ಫಾರ್ಮ್, ಪ್ರಯಾಣಿಕರ ಕಾಯುವ ಕೊಠಡಿ ಹಾಗೂ ಸುತ್ತಮುತ್ತಲಿನ ಆವರಣವನ್ನು ಸ್ವಚ್ಛಗೊಳಿಸಿದರು. ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯವನ್ನು ವಿಂಗಡಿಸಿ ವಿಲೇವಾರಿ ಮಾಡುವುದರ ಜೊತೆಗೆ ಪ್ರಯಾಣಿಕರಿಗೆ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ರೈಲ್ವೆ ಅಧಿಕಾರಿ ಶಾಲಿನಿ ಅವರು, ವಿದ್ಯಾರ್ಥಿಗಳ ಸೇವಾ ಮನೋಭಾವವನ್ನು ಶ್ಲಾಘಿಸಿ, “ಸ್ವಚ್ಛ ಭಾರತದ ಕನಸು ಇಂತಹ ಯುವಜನರ ಸಕ್ರಿಯ ಭಾಗವಹಿಸುವಿಕೆಯಿಂದ ಸಾಕಾರಗೊಳ್ಳುತ್ತದೆ” ಎಂದು ಹೇಳಿದರು.
















