ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಮಹಾತ್ಮ ಗಾಂಧಿ ಮೆಮೋರಿಯಲ್ ಸಂಧ್ಯಾ ಕಾಲೇಜು ವತಿಯಿಂದ ‘ಮೊಬೈಲ್ ಛಾಯಾಗ್ರಹಣದ ಮೂಲಕ ದೃಶ್ಯ ಸಂವಹನ’ ಕಾರ್ಯಕ್ರಮ ಎಂಬ ವಿಷಯದ ಕುರಿತು ವಿಶೇಷ ಕಾರ್ಯಕ್ರಮವು ಬುಧವಾರ ಕಾಲೇಜಿನ ಟಿ. ಮೋಹಂದಾಸ್ ಪೈ ಪ್ಲಾಟಿನಂ ಜುಬಿಲಿ ಬ್ಲಾಕ್‌ನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉದಯವಾಣಿಯ ಹಿರಿಯ ಸುದ್ದಿ ಛಾಯಾಗ್ರಾಹಕ ಹಾಗೂ ಫೋಟೋ ಜರ್ನಲಿಸ್ಟ್ ಆಸ್ಟ್ರೋ ಮೋಹನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮೊಬೈಲ್ ಛಾಯಾಗ್ರಹಣದ ಮೂಲಕ ಪರಿಣಾಮಕಾರಿ ದೃಶ್ಯ ಸಂವಹನ ನಡೆಸುವ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಛಾಯಾಚಿತ್ರದ ಮಹತ್ವ, ಸರಿಯಾದ ದೃಷ್ಟಿಕೋನ, ಬೆಳಕು, ಸಂಯೋಜನೆ ಹಾಗೂ ಸುದ್ದಿಯೊಂದನ್ನು ಚಿತ್ರಗಳ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಡುವ ಕುರಿತು ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್ ನಾಯಕ್ ಉಪಸ್ಥಿತರಿದ್ದರು. ಪ್ರಥಮ ಬಿಬಿಎ ವಿದ್ಯಾರ್ಥಿ ವಿಹಾನ್ ಸ್ವಾಗತ ಭಾಷಣ ಮಾಡಿದರು. ಕಾರ್ಯಕ್ರಮವನ್ನು ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಭೂಮಿಕಾ ಪಾಟ್ಕರ್ ನಿರೂಪಿಸಿದರು. ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಕಮಲಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.
















