ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ನಮ್ಮ ಜೀವನದಲ್ಲಿ ನಾವೇನಾದರೂ ಒಳ್ಳೆ ಸಾಧನೆ ಮಾಡಿದ್ದೇವೆ, ಸುಖವಾಗಿದ್ದೇವೆ ಎಂದಾದರೆ ಹೆತ್ತ ಅಮ್ಮನಿಗೆ, ಜನ್ಮ ಕೊಟ್ಟ ತಂದೆಗೆ ಮತ್ತು ವಿದ್ಯೆ ಕಲಿಸಿದ ಗುರುವಿಗೆ ಧನ್ಯವಾದವನ್ನು ಹೇಳಬೇಕು. ತಮ್ಮೆಲ್ಲ ಕಷ್ಟಗಳನ್ನು ಮರೆತು ವಿದ್ಯಾರ್ಥಿಗಳ ಬದುಕಿನ ಸಾಧನೆಯ ಕಾರಣಕ್ಕೆ ಶ್ರಮಿಸುವ ಶಿಕ್ಷಕರನ್ನು ಗೌರವಿಸಬೇಕು ಎಂದು ವಾಗ್ಮಿ, ಧಾರ್ಮಿಕ ಚಿಂತಕ ಎನ್. ದಾಮೋದರ ಶರ್ಮಾ ಹೇಳಿದರು.
ಅವರು ರೋಟರಿ ಕ್ಲಬ್ ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿಯ ಎಸ್. ವಿ. ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ನಡೆದ ವಲಯ ಮಟ್ಟದ ಮೂಲಭೂತ ಶಿಕ್ಷಣ ಮತ್ತು ಸಾಕ್ಷರತಾ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ವಿದ್ಯಾರ್ಥಿಗಳು ವ್ಯಸನಕ್ಕೆ ತುತ್ತಾಗಬಾರದು. ವಿದ್ಯಾರ್ಥಿ ಜೀವನದಲ್ಲಿ ಎಚ್ಚರ ತಪ್ಪಿದರೆ ಇಡೀ ಜೀವನ ಸಂಪೂರ್ಣ ಹಾಳಾಗುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆಯ ದಾರಿಗೆ ಬಂದು ತಮ್ಮ ಭವಿಷ್ಯವನ್ನು ಸರಿಯಾಗಿ ರೂಪಿಸಿಕೊಳ್ಳಬೇಕು.
ಕಾರ್ಯಕ್ರಮ ಉದ್ಘಾಟಿಸಿದ ರೋಟರಿ ವಲಯ-1ರ ಅಸಿಸ್ಟೆಂಟ್ ಗವರ್ನರ್ ಜೆ. ಶ್ರೀನಾಥ ರಾವ್ ಮಾತನಾಡಿ, ಮಕ್ಕಳಿಗೆ ಮೌಲ್ಯಯುತ ಶಿಕ್ಷಣದ ಅವಶ್ಯಕತೆ ಇದೆ. ಕನ್ನಡ ಮಾಧ್ಯಮ ಶಾಲೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಹಳ್ಳಿ ಶಾಲೆಗಳು ಮುಚ್ಚುಗಡೆಯಾಗುತ್ತಿದ್ದು, ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಇಲಾಖೆಯೊಂದಿಗೆ ರೋಟರಿ ಕೈಜೋಡಿಸಿ ಕೆಲಸ ಮಾಡುತ್ತಿದೆ ಎಂದರು.
ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷೆ ಮಾಲಾಶ್ರೀ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಧಾರ್ಮಿಕ ಚಿಂತಕ ದಾಮೋದರ ಶರ್ಮಾ ಅವರನ್ನು ಎಸ್.ವಿ. ಪದವಿ ಪೂರ್ವ ಕಾಲೇಜು ಮತ್ತು ಆಡಳಿತ ಮಂಡಳಿ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ., ವಲಯ ತರಬೇತುದಾರ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ರೋಟರಿ ವಲಯದ ಪ್ರಮುಖರಾದ ಉಮೇಶ್ ಎಲ್. ಮೇಸ್ತ, ಚಂದ್ರಕಲಾ ತಾಂಡೇಲ, ಪ್ರಶಾಂತ ಹವಾಲ್ದಾರ್, ಸತ್ಯನಾರಾಯಣ ಪುರಾಣಿಕ್, ಕಾಲೇಜಿನ ಸಂಚಾಲಕ ಎನ್.ಸದಾಶಿವ ನಾಯಕ್, ಮತ್ತಿತರರು ಉಪಸ್ಥಿತರಿದ್ದರು.
ಮಾಲಾಶ್ರೀ ಖಾರ್ವಿ ಸ್ವಾಗತಿಸಿದರು. ಉಮೇಶ ಮೇಸ್ತ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ನರೇಂದ್ರ ಎಸ್.ಗಂಗೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಗಿರೀಶ್ ಖಾರ್ವಿ ವಂದಿಸಿದರು.
















