ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಮಹಿಳಾ ವೇದಿಕೆಯ ಆಶ್ರಯದಲ್ಲಿ “ಪಿ.ಸಿ.ಓ.ಡಿ ಸಮಸ್ಯೆ -ಪರಿಹಾರ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವು ಶುಕ್ರವಾರ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರ ಗ್ರಾಮೀಣ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ ಇಲ್ಲಿನ ವೈದ್ಯರಾದ ಡಾ. ಮಯೂರ ಎಮ್.ಡಿ. ಮಾತನಾಡಿ, ಪಿಸಿಓಡಿ ಸಮಸ್ಯೆಯು ಪ್ರತಿ ಐದು ಜನ ಮಹಿಳೆಯರಲ್ಲಿ ಒಬ್ಬರಿಗೆ ಇರುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಈಗ 12ಮೇ 2026ರಿಂದ ಇದನ್ನು ಪಿ.ಎಮ್.ಓ.ಎಸ್. ಎಂದು ಕರೆಯಲಾಗುತ್ತದೆ.
ಈ ಸಮಸ್ಯೆ ಉಂಟಾಗಲು ಕಾರಣ ಮುಖ್ಯವಾಗಿ ಅತಿಯಾದ ಬೇಕರಿ ಪದಾರ್ಥಗಳು ಸೇವನೆ. ಅಹಿತಕರ ಜೀವನಶೈಲಿ, ಅತಿಯಾದ ಒತ್ತಡ, ದಡೂತಿತನ ಮೈದಾ ಹಿಟ್ಟಿನ ಆಹಾರ ಪದಾರ್ಥ ಸಕ್ಕರೆ, ಫಾರ್ಮ್ ಗಳಲ್ಲಿ ಸಾಕಿದ ಕೋಳಿ ಮೀನು ಮಾಂಸಗಳನ್ನು ಅತಿಯಾಗಿ ತಿನ್ನುವುದು ಹೀಗೆ ಹಲವು ಕಾರಣಗಳಿವೆ. ಪರಿಣಾಮವಾಗಿ ಹಾರ್ಮೋನ್ ಏರಿಳಿತ, ದಡೂತಿತನ, ಸುಸ್ತು, ಚರ್ಮದಲ್ಲಿ ಸಮಸ್ಯೆ ಕೂದಲು ಉದುರುವಿಕೆ, ಬಂಜೆತನ, ಋತುಚಕ್ರದಲ್ಲಿ ಏರಿಳಿತ ಹೀಗೆ ಹಲವು ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಿದರು.
ಪರಿಹಾರವಾಗಿ ದೇಹದ ತೂಕವನ್ನು ನಿಯಂತ್ರಿಸಬೇಕು. ಉತ್ತಮ ವ್ಯಾಯಾಮ, ಯೋಗ ಮಾಡಬೇಕು. ಅಂಡಾಶಯ ಗುಳ್ಳೆ ಆಗದಂತೆ ಚಿಕಿತ್ಸೆ ಪಡೆಯಬೇಕು. ಉತ್ತಮ ಜೀವನಶೈಲಿ ರೂಡಿಸಿಕೊಳ್ಳಬೇಕು ಆಲ್ಕೋಹಾಲ್ ಸೇವನೆ ಕಡಿಮೆ ಮಾಡಬೇಕು. ಆರ್ಗಾನಿಕ್ ಆಹಾರ ಸೇವಿಸಬೇಕು. ಪಂಚಕರ್ಮ ಚಿಕಿತ್ಸೆಗಳನ್ನು ಸಹ ಮಾಡಿಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿದ್ದರು.
ವೇದಿಕೆಯಲ್ಲಿ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸತ್ಯನಾರಾಯಣ, ಕುಂದಾಪುರ ಗ್ರಾಮೀಣ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ ಇಲ್ಲಿನ ವೈದ್ಯರಾದ ಡಾ. ಸಫಾ, ಡಾ. ಶಂಕಿತಾ, ನರ್ಸ್ ಇಂಚರ, ವಿದ್ಯಾರ್ಥಿಗಳಾದ ರಾಹುಲ್ ಮತ್ತು ದೀಪೇಶ್ ಉಪಸ್ಥಿತರಿದ್ದರು.
ಕಾಲೇಜಿನ ಮಹಿಳಾ ವೇದಿಕೆಯ ಸಂಚಾಲಕಿ ಸ್ನೇಹ ಎಸ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಶ್ರಾವ್ಯ ಮತ್ತು ಸಿಂಚನ ಪ್ರಾರ್ಥಿಸಿದರು. ಉನ್ನತಿ ಅತಿಥಿಗಳನ್ನು ಪರಿಚಯಿಸಿದರು. ಸಂಜನಾ ಕಾರ್ಯಕ್ರಮ ನಿರೂಪಿಸಿ, ರಕ್ಷಿತಾ ತೋಪಣ್ಣ ವಂದಿಸಿದರು.
















