ಕುಂದಾಪುರ: ರಾಜ, ಮಹಾರಾಜರಿಲ್ಲದ ಈ ದಿನಗಳಲ್ಲಿ ಪ್ರಜೆಗಳೇ ರಾಜರು ಎನ್ನುವ ಪರಿಕಲ್ಪನೆಯಲ್ಲಿ ನಡೆಯುತ್ತಿರುವ ಉಡುಪಿಯ ಅಷ್ಟಮಠಗಳ ಪರ್ಯಾಯ ಮಹೋತ್ಸವದ ಯಶಸ್ಸಿಗಾಗಿ, ನಾಡಿನ ಎಲ್ಲ ಕಡೆಯಿಂದ ಭಕ್ತರು ನೀಡುತ್ತಿರುವ ಸ್ಪಂದನಗಳು ಈ ಉತ್ಸವವನ್ನು ರಾಜಸೂಯ ಯಾಗದಂತೆ ಬಿಂಬಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿಗೆ ಸಮೀಪದ ಕುಂಭಾಸಿಯ ಶ್ರೀ ಆನೆಗುಡ್ಡೆ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಂದಾಪುರ ತಾಲ್ಲೂಕಿನ ಅಭಿಮಾನಿಗಳು ನೀಡಿದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು. ಭೂತ ಕನ್ನಡಿಯಲ್ಲಿ ಎಲ್ಲವೂ ದೊಡ್ಡದಾಗಿ ಕಾಣಿಸುತ್ತದೆ. ಅದರಂತೆ ಭಕ್ತರು ಪ್ರೀತಿ ಕನ್ನಡಿಯಲ್ಲಿ ನನ್ನನ್ನು ಹಾಗೂ ನಾನು ಮಾಡಿದ ಕಾರ್ಯವನ್ನು ನೋಡುವುದರಿಂದಾಗಿ ಅದೂ ದೊಡ್ಡದಾಗಿ ಕಾಣಿಸುತ್ತಿದೆ. ಯತಿ ಶ್ರೇಷ್ಠರಾಗಿದ್ದ ಮಧ್ವಾಚಾರ್ಯರು ಜಗತ್ತು ಹಾಗೂ ದೇವರು ಎನ್ನುವ ಎರಡು ಸತ್ಯವನ್ನು ತಿಳಿಸಿದ್ದರು. ದೇವರಲ್ಲಿ ಭಕ್ತಿ ಹಾಗೂ ಜಗತ್ತಿನಲ್ಲಿ ಕರ್ತವ್ಯ ಎನ್ನುವ ತಾತ್ವರ್ಯಗಳು ಇದಾಗಿದ್ದವು. ಕೇವಲ ಭಕ್ತಿ, ಧ್ಯಾನ ಹಾಗೂ ಪೂಜೆಗಳಿಂದ ಮಾತ್ರ ದೇವರನ್ನು ಸಂತೃಪ್ತಗೊಳಿಸಲು ಸಾಧ್ಯವಾಗುವುದಿಲ್ಲ, ಭಕ್ತಿಯ ಜತೆ ಸಮಾಜಮುಖಿ ಸೇವಾ ಕಾರ್ಯಗಳು ಇದ್ದಾಗ ಇನ್ನಷ್ಟು ಹೆಚ್ಚಿನ ಪೂಜಾ ಫಲವನ್ನು ಪಡೆಯಲು ಸಾಧ್ಯವಾಗುತ್ತದೆ. ಎರಡಂಶದ ಕರ್ತವ್ಯ ದೀಕ್ಷೆಯನ್ನು ಬೋಧಿಸಿದ್ದ ಮಧ್ವಾಚಾರ್ಯರು ಈ ಅಂಶಗಳ ಪರಿಪಾಲನೆ ಮಾಡುವ ಎಲ್ಲರಿಗೂ ಭಕ್ತಿ ದೀಕ್ಷೆ ನೀಡುವುದಾಗಿ ನುಡಿದ ಮಹಾನ್ ಸನ್ಯಾಸಿ. ಇಂತಹ ಶೃದ್ದಾ ಭಕ್ತಿಯನ್ನು ಹೊಂದಿದ್ದ ಅಪೂರ್ವ ಯತಿಯನ್ನು ಪಡೆದುಕೊಂಡಿದ್ದ ಕರಾವಳಿಯ ಜನರು ಹೆಮ್ಮೆ ಪಡಬೇಕು ಎಂದು ಅವರು ಹೇಳಿದರು.
ಮಾಜಿ ಶಾಸಕ ಎ.ಜಿ ಕೊಡ್ಗಿಯವರು ಅಧ್ಯಕ್ಷತೆ ವಹಿಸಿದ್ದರು. ಪೇಜಾವರ ಮಠದ ಕಿರಿಯ ಯತಿಗಳಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ, ಉದ್ಯಮಿ ಎನ್.ರಾಘವೇಂದ್ರ ರಾವ್ ನೇರಂಬಳ್ಳಿ ಇದ್ದರು.
ಕುಂದಾಪುರ ತಾಲ್ಲೂಕಿನ ಭಕ್ತರು ಹಾಗೂ ಅಭಿಮಾನಿಗಳ ಪರವಾಗಿ ಪೇಜಾವರ ಶ್ರೀಗಳನ್ನು ಸನ್ಮಾನಿಸಿ, ೧೦ ಲಕ್ಷ ರೂಪಾಯಿಗಳ ನಿಧಿಯನ್ನು ಅರ್ಪಿಸಲಾಯಿತು. ಇದೆ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಆನೆಗುಡ್ಡೆಯ ವಿಸ್ತರಿತ ಭೋಜನಾ ಗ್ರಹವನ್ನು ಪೇಜಾವರ ಶ್ರೀಗಳು ಲೋಕಾರ್ಪಣೆ ಮಾಡಿದರು.
ಅಭಿನಂದನಾ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಸ್ವಾಗತಿಸಿದರು, ಕೆ.ಎಸ್ ಉಪಾಧ್ಯಾಯ ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು, ಉಡುಪಿಯ ವಿದ್ವಾಂಸ ಗೋಪಾಲ ಆಚಾರ್ಯ ಅಭಿನಂದನಾ ಪತ್ರ ವಾಚಿಸಿದರು, ಅಭಿನಂದನಾ ಸಮಿತಿಯ ಕಾರ್ಯದರ್ಶಿ ಯು.ಎಸ್ ಶೆಣೈ ನಿರೂಪಿಸಿದರು.