ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2006–07ನೇ ಸಾಲಿನ ಪದವಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರು ಸಮ್ಮಾನ ಕಾರ್ಯಕ್ರಮವು ಕಾಲೇಜಿನಲ್ಲಿ ಸಂಭ್ರಮದಿಂದ ನಡೆಯಿತು.
ಸುಮಾರು 19 ವರ್ಷಗಳ ಬಳಿಕ ಒಂದೆಡೆ ಸೇರಿದ ಹಳೆಯ ವಿದ್ಯಾರ್ಥಿಗಳು ತಮ್ಮ ಕಾಲೇಜು ಜೀವನದ ಸವಿನೆನಪುಗಳನ್ನು ಮೆಲುಕು ಹಾಕಿ, ಹಳೆಯ ಸ್ನೇಹವನ್ನು ಮತ್ತೆ ನವೀಕರಿಸಿಕೊಂಡರು. ವಿದ್ಯಾರ್ಥಿ ಜೀವನದಲ್ಲಿ ಜೊತೆಯಾಗಿ ಕಳೆದ ಕ್ಷಣಗಳು, ತರಗತಿಯ ಅನುಭವಗಳು ಹಾಗೂ ಅಂದಿನ ಒಡನಾಟವನ್ನು ನೆನಪಿಸಿಕೊಂಡು ಸಂತಸ ಹಂಚಿಕೊಂಡರು.

ವಿದ್ಯಾರ್ಥಿಗಳ ಬದುಕಿಗೆ ಜ್ಞಾನದ ಬೆಳಕು ನೀಡಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡಿದ ಗುರುಗಳನ್ನು ಗೌರವಿಸುವ ಸಲುವಾಗಿ ಗುರು ಸಮ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗುರುಗಳ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಬೋಧನೆಗಳು ಜೀವನದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಹಳೆಯ ವಿದ್ಯಾರ್ಥಿಗಳು ಕೃತಜ್ಞತೆ ವ್ಯಕ್ತಪಡಿಸಿದರು.
ಕಾರ್ಯಕ್ರಮವು ಹಳೆಯ ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಜೊತೆಗೆ, ಗುರು-ಶಿಷ್ಯರ ನಡುವಿನ ಆತ್ಮೀಯ ಸಂಬಂಧವನ್ನು ಸ್ಮರಿಸುವ ವಿಶೇಷ ಸಂದರ್ಭವಾಯಿತು. ಕಾಲೇಜಿನಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದ ವಿದ್ಯಾರ್ಥಿಗಳು, ಇಂತಹ ಸಮ್ಮಿಲನಗಳು ಜೀವನದ ಅಮೂಲ್ಯ ನೆನಪುಗಳನ್ನು ಮತ್ತೆ ಜೀವಂತಗೊಳಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಕಾಲೇಜಿಗೆ ಶುದ್ದ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದರು.
ನೆನಪು, ಸ್ನೇಹ ಮತ್ತು ಗುರುಗಳ ಮೇಲಿನ ಗೌರವದ ಸಂಗಮವಾಗಿದ್ದ ಈ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಭಾಗವಹಿಸಿದ ಹಳೆಯ ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿಸಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಸ.ಪ್ರ.ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಉಮೇಶ್ ಮಯ್ಯ ಅವರು ವಹಿಸಿಕೊಂಡಿದ್ದರು. ಉದ್ಘಾಟನೆಯನ್ನು ಡಾಕ್ಟರ್ ರಾಜೇಂದ್ರ ನಾಯಕ್ ನೆರವೇರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರುಗಳಾದ ಬಿ.ಆರ್. ಪಾಟೀಲ್, ರಾಮರಾಯ ಆಚಾರ್ಯ, ಡಾ. ಉದಯ್ ಕುಮಾರ್ ಶೆಟ್ಟಿ, ಡಾ. ರವಿರಾಜ್ ಶೆಟ್ಟಿ, ಸೋಮಶೇಖರ್, ದಾಮೋದರ ಗೌಡ, ನಾಗೇಶ್, ಪಾಂಡುರಂಗ, ರಾಜಶೇಖರ ಹೆಬ್ಬಾರ್, ಗುಲಾಬಿ, ಕಮಲ, ಬೋಧಕ ವೃಂದದ ನೆಲೆಯಲ್ಲಿ ನಾಗರತ್ನ ಉಪಸ್ಥಿತರಿದ್ದರು.
ಹಳೇ ವಿದ್ಯಾರ್ಥಿಗಳಾದ ಅಣ್ಣಪ್ಪ ಶೆಟ್ಟಿ, ಸುಧಾಕರ, ವಿನಯ ಕುಮಾರ, ಸುಷ್ಮಾ ಮತ್ತು ದೇವರಾಜ ಕಾರ್ಯಕ್ರಮವನ್ನು ಸಂಘಟಿಸುವಲ್ಲಿ ಸಹಕರಿಸಿ ಸಂದೀಪ ಪ್ತಾಸ್ತಾವಿಕ ನುಡಿದು, ಲತಾ ಕಾರ್ಯಕ್ರಮ ನಿರ್ವಹಿಸಿದರು.

















