ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾದ 2026ನೇ ಸಾಲಿನ SGFI (State Syllabus) 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಕರ್ನಾಟಕ ರಾಜ್ಯಮಟ್ಟದ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಕುಂದಾಪುರದ ಕಶ್ವಿ ಚೆಸ್ ಶಾಲೆಯ ಪ್ರತಿಭಾನ್ವಿತ ಚೆಸ್ ಆಟಗಾರರಾದ ಅವನೀಶ್ ಪ್ರಸಾದ್ ಕೆ. ಹಾಗೂ ಲಾಸ್ಯ ಶೆಟ್ಟಿ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟದಲ್ಲಿ ತೃತೀಯ ಹಾಗೂ ನಾಲ್ಕನೇ ಸ್ಥಾನಗಳನ್ನು ಗಳಿಸುವ ಮೂಲಕ ರಾಷ್ಟ್ರೀಯ ಮಟ್ಟದ ಚೆಸ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಅಕ್ಟೋಬರ್ 15ರಿಂದ 17ರವರೆಗೆ ನಡೆದ SGFI ಕರ್ನಾಟಕ ರಾಜ್ಯಮಟ್ಟದ 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಕುಂದಾಪುರದ ಕಾಶ್ವಿ ಚೆಸ್ ಶಾಲೆಯ ವಿದ್ಯಾರ್ಥಿಗಳಾದ ಅವನೀಶ್ ಪ್ರಸಾದ್ ಕೆ. ಹಾಗೂ ಲಾಸ್ಯ ಶೆಟ್ಟಿ ಅವರು ಅತ್ಯುತ್ತಮ ಪ್ರದರ್ಶನ ನೀಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರತಿಭಾನ್ವಿತ ಚೆಸ್ ಆಟಗಾರರು ಭಾಗವಹಿಸಿದ್ದರು. ತೀವ್ರ ಪೈಪೋಟಿಯ ನಡುವೆಯೂ ಕುಂದಾಪುರದ ಇಬ್ಬರು ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡುವ ಮೂಲಕ ಉಡುಪಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ
14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಅವನೀಶ್ ಪ್ರಸಾದ್ ಕೆ. ಅವರು ತೃತೀಯ ಸ್ಥಾನ ಹಾಗೂ ಬಾಲಕಿಯರ ವಿಭಾಗದಲ್ಲಿ ಲಾಸ್ಯ ಶೆಟ್ಟಿ ಅವರು 9 ಸುತ್ತುಗಳಲ್ಲಿ 7.5 ಅಂಕಗಳನ್ನು ಗಳಿಸಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಇಬ್ಬರೂ ತಮ್ಮ ಅತ್ಯುತ್ತಮ ಚೆಸ್ ಕೌಶಲ್ಯ, ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ಚತುರ ಆಟದ ಮೂಲಕ ಪ್ರಬಲ ಸ್ಪರ್ಧಿಗಳ ವಿರುದ್ಧ ಗಮನಾರ್ಹ ಪ್ರದರ್ಶನ ನೀಡಿ ಈ ಸಾಧನೆ ಮಾಡಿದ್ದಾರೆ.
ಅವನೀಶ್ ಪ್ರಸಾದ್ ಕೆ. ಅವರು ಸಂತೋಷ್ ಕಾರ್ವಿ ಹಾಗೂ ಮಾಲತಿ ಕಾರ್ವಿ ದಂಪತಿಯ ಪುತ್ರರಾಗಿದ್ದು, ಹೆಮ್ಮಾಡಿಯ ಜನತಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಲಾಸ್ಯ ಶೆಟ್ಟಿ ಅವರು ಮಹೇಶ್ ಶೆಟ್ಟಿ ಹಾಗೂ ದೀಪಿಕಾ ಶೆಟ್ಟಿ ದಂಪತಿಯ ಪುತ್ರಿಯಾಗಿದ್ದು, ಬ್ರಹ್ಮಾವರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಈ ಇಬ್ಬರೂ ಮಧ್ಯಪ್ರದೇಶದಲ್ಲಿ ನಡೆಯಲಿರುವ SGFI ರಾಷ್ಟ್ರೀಯ ಮಟ್ಟದ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಅರ್ಹತೆ ಪಡೆದಿದ್ದು, ಕುಂದಾಪುರ ಹಾಗೂ ಉಡುಪಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

















