ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಕೆ.ಎಸ್.ಆರ್.ಟಿ.ಸಿ ನಿಲ್ದಾಣ ಆರಂಭಗೊಂಡು ಒಂದು ವರ್ಷ ಕಳೆಯುತ್ತಾ ಬಂದರೂ ಸಂಪೂರ್ಣ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಹಾಗೂ ನಿಲ್ದಾಣ ಮೂಲಕವೇ ಹೆಚ್ಚಿನ ಸರ್ಕಾರಿ ಬಸ್ಸುಗಳ ಸಂಚರಿಸುವಂತೆ ಮಾಡುವಲ್ಲಿ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ. ಲಾಭಿಗೆ ಮಣಿದು ಸರ್ಕಾರಿ ಬಸ್ ನಿಲ್ದಾಣವನ್ನು ಮುಚ್ಚುವ ವ್ಯವಸ್ಥಿತ ಹುನ್ನಾರ ಇದರ ಹಿಂದಿದೆ ಎಂದು ಎಂದು ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೋಹನ್ ಪೂಜಾರಿ ಆರೋಪಿಸಿದ್ದಾರೆ.

ಅವರು ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ಯಾರಂಟಿ ಅನುಷ್ಠಾನ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನ ಯಡ್ತರೆಯಲ್ಲಿ ಸುಸಜ್ಜಿತವಾದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಆಗಿದ್ದರೂ ಸರ್ವಿಸ್ ರಸ್ತೆ ಆಗದ ಸಮಸ್ಯೆಯಾಗುತ್ತಿದೆ. ರಾತ್ರಿಯಾಗುತ್ತಿದ್ದಂತೆ ನಿಲ್ದಾಣದ ಲೈಟ್ಗಳನ್ನು ಬಂದ್ ಮಾಡಿ ಸಾರ್ವಜನಿಕರು ಸಂಚರಿಸದಂತೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಿಗೆ ಹೆಚ್ಚುವರಿ ಬಸ್ ಸೇವೆ ಒದಗಿಸುವಂತೆ ಹಾಗೂ ದೂರದ ಎಲ್ಲಾ ಬಸ್ಸುಗಳು ಬೈಂದೂರು ಕೆ.ಎಸ್.ಆರ್.ಟಿ.ಸಿ ನಿಲ್ದಾಣ ಮೂಲಕವೇ ತೆರಳುವಂತೆ ತಿಳಿಸಲಾಗಿದ್ದರೂ ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ನವರಾತ್ರಿ ಸಂದರ್ಭದಲ್ಲಿ ಕೊಲ್ಲೂರಿಗೆ ಕಾಟಾಚಾರಕ್ಕೆ 2 ದಿನ ವಿಶೇಷ ಬಸ್ ಸೇವೆ ಒದಗಿಸಲಾಗಿತ್ತು. ಹೀಗೆ ಮುಂದುವರಿದರೆ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದವರು ಎಚ್ಚರಿಸಿದರು.
ಗ್ಯಾರಂಟಿಯಿಂದ ಸೆಪ್ಟೆಂಬರ್ ತನಕ 343.88 ಕೋಟಿ:
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಬೈಂದೂರು ತಾಲೂಕಿಗೆ ಸೆಪ್ಟೆಂಬರ್ ತಿಂಗಳ ತನಕ ಸುಮಾರು 343.88 ಕೋಟಿ ರೂ. ವೆಚ್ಚಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಯಿಂದ ಜೂನ್ ತಿಂಗಳಲ್ಲಿ 26,663 ಫಲಾನುಭವಿಗಳಿಗೆ 5.33ಕೋಟಿ ಜಮಾ ಆಗಿದೆ. 2531 ಮಂದಿಗೆ ಹಣ ಬರುವುದು ಬಾಕಿ ಇದ್ದು ಈ ಪೈಕಿ ಆಧಾರ್ ಮ್ಯಾಪಿಂಗ್, ಐಟಿ-ಜಿಎಸ್ಟಿ ಹಾಗೂ ಹೊಸ ನೊಂದಣಿಯವರೂ ಸೇರಿದ್ದಾರೆ. ಜುಲೈ ತಿಂಗಳಿನಿಂದ ಫಲಾನುಭವಿಗಳಿಗೆ ಹಣ ಸಂದಾಯವಾಗುವುದು ಬಾಕಿ ಇದೆ. ಗೃಹ ಜ್ಯೋತಿ ಯೋಜನೆಯಿಂದ ಸೆಪ್ಟೆಂಬರ್ ತಿಂಗಳಿನಲ್ಲಿ ಬೈಂದೂರು ಮೆಸ್ಕಾಂ ವ್ಯಾಪ್ತಿಯ 28,321 ಕುಟುಂಬಗಳ 1..86 ಕೋಟಿ ರೂ., ತಲ್ಲೂರು ಮೆಸ್ಕಾಂ ಉಪ ಕೇಂದ್ರ ವ್ಯಾಪ್ತಿಯ 1856 ಕುಟುಂಬಗಳ 12.31 ಲಕ್ಷ ರೂ. ಸೇರಿದಂತೆ ಒಟ್ಟು ಈ ತನಕ 70.476ಕೋಟಿ ರೂ. ವೆಚ್ಚವಾಗಿದೆ. ಅನ್ನಭಾಗ್ಯ ಯೋಜನೆಯಡಿ 25,532 ಪಡಿತರ ಚೀಟಿಗಳಿಗೆ 1.91 ಕೋಟಿ ರೂ. ವಿನಿಯೋಗಿಸಲಾಗಿದೆ.
ಯುವ ನಿಧಿ ಯೋಜನೆಯಡಿ 737 ಫಲಾನುಭವಿಗಳ ನೊಂದಣಿಯಾಗಿದ್ದು 686 ಮಂದಿಗೆ ಒಟ್ಟು 1.98ಕೋಟಿ ರೂ. ಜಮಾ ಆಗಿದೆ. ಶಕ್ತಿ ಯೋಜನೆಯಡಿ ಇದುವರೆಗೆ 2.60ಕೋಟಿ ಮಹಿಳೆಯರು ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸಿದ್ದು 99.31ಕೋಟಿ ರೂ. ರಿಯಾಯಿತಿ ಪಡೆದಿದ್ದಾರೆ ಎಂದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಕಾರಿ ನಾಗಶಯನ. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಮಾಲತಿ ಶಿವಾನಂದ, ಅನೀಶ್ ಪೂಜಾರಿ, ಸೂರ್ಯಕಾಂತಿ ಡಿ., ದೇವದಾಸ್ ವಿ.ಜೆ., ಬಾಬು ದೇವಾಡಿಗ, ಮುಕ್ರಿ ಮೊಹಮ್ಮದ್ ಅಲ್ತಾಫ್, ಪ್ರಭಾಕರ ನಾಯ್ಕ್, ರಾಮಚಂದ್ರ ಖಾರ್ವಿ, ಅಣ್ಣಪ್ಪ ಶೆಟ್ಟಿ ಮೆಸ್ಕಾಂ, ಕೆಎಸ್ಆರ್ಟಿಸಿ, ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

















