ಕುಂದಾಪುರ: ಮುಂಬರುವ ತಾಪಂ. ಜಿಪಂ ಚುನಾವಣೆಗೆ ಬಿಜೆಪಿ ಈಗಾಗಲೇ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಜಿಪಂ.ನಲ್ಲಿ ಪುನ: ಅಧಿಕಾರಕ್ಕೇರುವ ಪ್ರಯತ್ನ ಪಕ್ಷದಲ್ಲಿ ನಡೆಯುತ್ತಿದೆ. ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಕ್ಷೇತ್ರ ಮಟ್ಟದಿಂದ ಶಿಫಾರಸ್ಸುಗೊಂಡ ಅಭ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾ ಮಟ್ಟದ ಸಮಿತಿ ಪರಿಶೀಲನೆ ನಡೆಸಿ ರಾಜ್ಯ ಸಮಿತಿಗೆ ಕಳುಹಿಸಿಕೊಡಲಿದೆ. ಹೀಗಾಗಿ ಚುನಾವಣೆಗೆ ಬಿಜೆಪಿ ಸಕಲ ಸಿದ್ಧತೆ ನಡೆಸುತ್ತಿದ್ದು ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಮುಖ್ಯಮಂತ್ರಿ, ಸಂಸದ ಬಿ.ಎಸ್.ಯಡಿಯೂರಪ್ಪ, ವಿಧಾನ ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಮತ್ತು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ಅನುದಾನದಲ್ಲಿ ಸುಮಾರು 7.5ಲಕ್ಷ ರೂ. ವೆಚ್ಚದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಜ್ಜಾಡಿ ಗ್ರಾಮ ಪಂಚಾಯತ್‌ನ ಕೊಡಪಾಡಿ ಮುಖ್ಯರಸ್ತೆಯಿಂದ ಶ್ರೀ ಗುಹೇಶ್ವರ ದೇವಸ್ಥಾನದವರೆಗಿನ ರಸ್ತೆಯ ಮರು ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು
ಬಳಿಕ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ರಸ್ತೆ ಅಭಿವೃದ್ಧಿಗೆ ಸಂಸದರೂ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಪುಟ್ಟಸ್ವಾಮಿ ಅವರು ನೀಡಿದ ಅನುದಾನದ ಸದ್ಭಳಕೆ ಮಾಡಿಕೊಂಡು ಸುಸಜ್ಜಿತವಾದ ರಸ್ತೆಯನ್ನು ನಿರ್ಮಿಸಬೇಕು. ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಸರಕಾರದಿಂದ ದೊರೆಯುವ ಸೌಲಭ್ಯ ಹಾಗೂ ಪ್ರಯೋಜನವನ್ನು ಈ ಭಾಗಕ್ಕೆ ನೀಡಲು ಹೆಚ್ಚಿನ ಮುತುವರ್ಜಿ ವಹಿಸುವುದಾಗಿ ಭರವಸೆ ನೀಡಿದರು.
ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ.ಸುಕುಮಾರ ಶೆಟ್ಟಿ, ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ ಮೇಸ್ತ, ಉಪಾಧ್ಯಕ್ಷೆ ಸುನೀತಾ ಪೂಜಾರಿ, ಗ್ರಾಪಂ ಸದಸ್ಯರಾದ ಶೇಖರ ದೇವಾಡಿಗ, ಜಯಂತಿ, ದೇವಿ ಮೇಸ್ತ, ಬಿಜೆಪಿ ಮುಖಂಡರಾದ ನಾರಾಯಣ ಕೆ., ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ರಾಜೇಶ ಪೂಜಾರಿ, ಕಂಬದಕೋಣೆ ಜಿಪಂ ಕ್ಷೇತ್ರದ ಸಂಭಾವ್ಯ ಬಿಜೆಪಿ ಅಭ್ಯರ್ಥಿ ಪ್ರಿಯದರ್ಶಿನಿ, ಬೈಂದೂರು ಕ್ಷೇತ್ರ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರೆನ್ಸಮ್ ಪಿರೇರಾ, ಹೊಸಾಡು ಗ್ರಾಪಂ ಸದಸ್ಯ ಸುರೇಶ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
ಕೊಟಪಾಡಿ ದೇವಸ್ಥಾನ ಭೇಟಿ:
ಇದಕ್ಕೂ ಮೊದಲು ಕೋಟ ಶ್ರೀನಿವಾಸ ಪೂಜಾರಿ ಅವರು ಕೊಡಪಾಡಿಯ ಶ್ರೀ ಗುಹೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಶ್ರೀದೇವಳದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮವನ್ನು ವೀಕ್ಷಿಸಿದ ಅವರು ಶ್ರೀದೇವರ ದರ್ಶನ ಪಡೆದ ಅವರು ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ದೇವಳಕ್ಕೆ ಆಗಮಿಸಿದ ಶ್ರೀನಿವಾಸ ಪೂಜಾರಿ ಅವರನ್ನು ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ.ಸುಕುಮಾರ ಶೆಟ್ಟಿ ಹಾಗೂ ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ ಮೇಸ್ತ ಸ್ವಾಗತಿಸಿದರು. ಬಿಜೆಪಿ ಮುಖಂಡರಾದ ನಾರಾಯಣ ಕೆ., ಗುಜ್ಜಾಡಿ ಗ್ರಾಪಂ ಸದಸ್ಯ ಶೇಖರ ದೇವಾಡಿಗ, ಕಂಬದಕೋಣೆ ಜಿಪಂ ಕ್ಷೇತ್ರದ ಸಂಭಾವ್ಯ ಬಿಜೆಪಿ ಅಭ್ಯರ್ಥಿ ಪ್ರಿಯದರ್ಶಿನಿ, ಬೈಂದೂರು ಕ್ಷೇತ್ರ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರೆನ್ಸಮ್ ಪಿರೇರಾ, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ರಾಜೇಶ ಪೂಜಾರಿ, ಗುಜ್ಜಾಡಿ ಗ್ರಾಪಂ ಸದಸ್ಯರು, ದೇವಳದ ಅರ್ಚಕರು, ಗ್ರಾಮಸ್ಥರು ಮೊದಲಾದವರು ಉಪಸ್ಥಿತರಿದ್ದರು.