ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ತೆಕ್ಕೆಟ್ಟೆಯ ವಿಶ್ವವಿನಾಯಕ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡೋತ್ಸವವನ್ನು ಶುಕ್ರವಾರದಂದು ಅತ್ಯಂತ ಸಂಭ್ರಮ ಹಾಗೂ ಉತ್ಸಾಹದಿಂದ ಉದ್ಘಾಟಿಸಲಾಯಿತು.
ಕಾರ್ಯಕ್ರಮವು ಗಣ್ಯ ಅತಿಥಿಗಳಾದ ರಂಜಿತ್ ಪೂಜಾರಿ ಅವರ ಉಪಸ್ಥಿತಿಯಲ್ಲಿ ಕ್ರೀಡಾಜ್ಯೋತಿ ಬೆಳಗಿಸುವುದರ ಮೂಲಕ ಆರಂಭಗೊಂಡಿತು. ಕ್ರೀಡಾಜ್ಯೋತಿಯು ಕ್ರೀಡಾಸ್ಪೂರ್ತಿ, ಏಕತೆ, ಶಿಸ್ತು ಮತ್ತು ಗೆಲುವಿನ ಸಂಕೇತವಾಗಿ ಎಲ್ಲರ ಗಮನ ಸೆಳೆಯಿತು. ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ವಿವಿಧ ತಂಡಗಳ ವಿದ್ಯಾರ್ಥಿಗಳು ತಮ್ಮ ತಂಡದ ಬಣ್ಣದ ಸಮವಸ್ತ್ರದಲ್ಲಿ ಶಿಸ್ತಿನಿಂದ ಹೆಜ್ಜೆ ಹಾಕಿ ಕ್ರೀಡಾಗೌರವವನ್ನು ಹೆಚ್ಚಿಸಿದರು. ವಿದ್ಯಾರ್ಥಿಗಳು ಕ್ರೀಡಾ ಪ್ರತಿಜ್ಞೆಯನ್ನು ಸ್ವೀಕರಿಸುವ ಮೂಲಕ ಕ್ರೀಡಾ ನಿಯಮಗಳನ್ನು ಪಾಲಿಸುವ ಹಾಗೂ ಪ್ರಾಮಾಣಿಕವಾಗಿ ಸ್ಪರ್ಧಿಸುವ ಸಂಕಲ್ಪ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಅತಿಥಿಗಳು ಕ್ರೀಡೆಯು ಕೇವಲ ಗೆಲುವು ಮತ್ತು ಸೋಲಿನ ಆಟವಲ್ಲ, ಅದು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಹನೆ, ಸಮಯಪ್ರಜ್ಞೆ, ನಾಯಕತ್ವ, ಆತ್ಮಸ್ಥೈರ್ಯ ಬೆಳೆಸುವ ವೇದಿಕೆಯಾಗಿದೆ. ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮತ್ತು ಪ್ರಯತ್ನ ಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿ.ಇ.ಒ ವಿವಿರಾಜ್ ಹೆಗ್ಡೆ, ಸಂಸ್ಥೆಯ ಪ್ರಾಂಶುಪಾಲರಾದ ಸಂದೀಪ್ ಪುತ್ರನ್, ಕಾಲೇಜು ಪ್ರಾಂಶುಪಾಲರಾದ ಮನೋಜ್ ಕುಮಾರ್, ಆಡಳಿತಾಧಿಕಾರಿ ಹರೀಶ್ ಮರವಂತೆ, ಶಿಕ್ಷಕವೃಂದ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿಧ್ಯಾರ್ಥಿಗಳಾದ ನವಮಿ ಸ್ವಾಗತಿಸಿ, ಹನಾಬಾನು ಅತಿಥಿ ಪರಿಚಯಿಸಿ, ಸಾನಿಕ ನಿರೂಪಣೆ ಮಾಡಿ, ಮನೀಶ್ ವಂದಿಸಿದರು.

















