ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಗೋವಿನ ಮಹತ್ವದ ಬಗ್ಗೆ ಇಂದಿನ ಯುವ ಜನಾಂಗ ಅರ್ಥೈಸಿಕೊಂಡು ಗೋ ಸಾಕಣೆಗೆ ಮುಂದಾಗಬೇಕಿದೆ ಎಂದು ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ. ಕೆ. ಕೃಷ್ಣ ಕಾಂಚನ್ ಹೇಳಿದರು.
ಅವರು ಸೋಮವಾರ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಕೋಟ ಸಹಕಾರಿ ವ್ಯವಸಾಯಕ ಸಂಘದ ಸಹಯೋಗದೊಂದಿಗೆ ಕೋಡಿ ಕನ್ಯಾಣ ಸದಾಶಿವ ಐತಾಳ್‌ರ ಮನೆಯಂಗಳದಿ ಐದನೇ ವರ್ಷದ ಗೋ ಆರಾಧನೆ ಗೋ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಕಾಲಘಟ್ಟದಲ್ಲಿ ಹಿರಿಯರು ನೀಡಿದ ಬಳವಳಿಯನ್ನು ಮರೆತ್ತಿದ್ದೇವೆ ಅದರಲ್ಲೂ ಬಹುಮುಖ್ಯವಾಗಿ ಗೋ ಸಾಕಣೆ ಕುಂಠಿತಗೊಳ್ಳುವ ಕಳವಳ ವ್ಯಕ್ತಪಡಿಸಿದ ಅವರು ಈ ದಿಸೆಯಲ್ಲಿ ಕೋಟ ಸಹಕಾರಿ ವ್ಯವಸಾಯಕ ಸಂಘ ಕ್ಷೀರ ಸಂಜೀವಿನಿ ಯೋಜನೆಯ ಮೂಲಕ ಹೊಸ ಆಯಾಮ ನೀಡಿದೆ.
ಗೋ ಪೂಜೆಯ ಮೂಲಕ ಪಂಚವರ್ಣ ಸಂಘಟನೆ ಮಹತ್ತರವಾದ ಸಾಮಾಜಿಕ ಕಾರ್ಯಗಳನ್ನು ನೀಡುತ್ತಿದೆ ಇದು ಅತ್ಯಂತ ಪ್ರಶಂಸನೀಯ ಕಾರ್ಯ,ಕೋಡಿ ಸದಾಶಿವ ಐತಾಳರ ಮನೆಯಲ್ಲಿರುವ ಗೋವುಗಳು ಅತಿ ಹೆಚ್ಚು ವರ್ಷಗಳ ಕಾಲ ಜೀವಿತಗೊಂಡ ಹಸುಗಳು ಇವರ ನಿಸ್ವಾರ್ಥ ಗೋ ಸೇವೆ ಅಭಿನಂದನಾರ್ಹ ಎಂದರು.
ಈ ವೇಳೆ ಹಿರಿಯ ಹೈನುಗಾರ ಸದಾಶಿವ ಐತಾಳ ದಂಪತಿಗಳು ಗೋ ಪೂಜೆಯನ್ನು ನೆರವೇರಿಸಿದರು. ಮುಖ್ಯ ಅಭ್ಯಾಗತರಾಗಿ ಕೋಟ ಸಹಕಾರಿ ವ್ಯವಸಾಯಕ ಸಂಘದ ಸಿಇಓ ಶರತ್ ಕುಮಾರ್ ಶೆಟ್ಟಿ, ಕರ್ಣಾಟಕ ಬ್ಯಾಂಕ್ ನಿವೃತ್ತ ಪ್ರಭಂಧಕ ಕೋಡಿ ಚಂದ್ರಶೇಖರ್ ನಾವಡ, ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಮನೋಹರ್ ಪೂಜಾರಿ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.
ಸಂಸ್ಥೆಯ ಗೌರವ ಸಲಹೆಗಾರರಾದ ಪೂರ್ಣಿಮಾ ಅಧಿಕಾರಿ ಸ್ವಾಗತಿಸಿ, ಗೋವಿನ ಮಹತ್ವದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ರವೀಂದ್ರ ಕೋಟ ವಂದಿಸಿ, ಸಂಯೋಜಿಸಿದರು.

















