ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲಿಗೆ ನವೆಂಬರ್ 13ರ ಶುಕ್ರವಾರದಂದು ಮಧ್ಯಾಹ್ನ 2 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಂಗಳೂರು ಜಂಕ್ಷನ್ನಲ್ಲಿ ಕರಾವಳಿಯಿಂದ ಬೆಂಗಳೂರು ಕಡೆ ಸಾಗುವ ವಂದೇ ಭಾರತ್ ರೈಲಿನ ಸಾಂಕೇತಿಕ ಉದ್ಘಾಟನೆಯೂ ಅದೇ ವೇಳೆ ನಡೆಯಲಿದ್ದು, ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳೂರು, ಉಡುಪಿ, ಉತ್ತರಕನ್ನಡ ಸಂಸದರ ಜತೆ ಮಡಗಾಂವ್-ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ನವೆಂಬರ್ 13ರ ಉದ್ಘಾಟನೆಯ ಬಳಿಕ ನಿಯಮಿತ ಸೇವೆಗಳು ನವೆಂಬರ್ 15ರಿಂದ ಎರಡೂ ಕಡೆಯಿಂದ ಆರಂಭವಾಗಲಿವೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ವಿ. ಸೋಮಣ್ಣ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ವಂದೇ ಭಾರತ್ ಕರಾವಳಿ ಬೆಸೆಯಲು ಸಹಕಾರ ನೀಡಿದ ಮಂಗಳೂರು ಸಂಸದ ಬ್ರಿಜೇಶ್ ಚೌಟ ಮತ್ತು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕೋಟ ಶ್ರೀನಿವಾಸ ಪೂಜಾರಿ ಧನ್ಯವಾದ ಸಲ್ಲಿಸಿದ್ದಾರೆ.
2019ನೇ ಇಸವಿಯಲ್ಲಿ ಅಂದಿನ ರೈಲ್ವೇ ಸಚಿವ ಪಿಯೂಷ್ ಗೋಯಲ್ ಬೆಂಗಳೂರಿಗೆ ವಂದೇ ಭಾರತ್ ರೈಲು ಓಡಿಸುವ ಕನಸು ಬಿತ್ತಿದ್ದರು. ಆದರೆ ಆಗ ಸಕಲೇಶಪುರ ಸುಬ್ರಹ್ಮಣ್ಯ ಘಾಟ್ ವಿದ್ಯುದೀಕರಣದ ಕೆಲಸ ಬಾಕಿ ಇತ್ತು. ಮುಂದೆ ಭಾರತೀಯ ರೈಲ್ವೇಯ ಸಂಪೂರ್ಣ ವಿದ್ಯುದೀಕರಣ ಯೋಜನೆಯಂತೆ ಸಂಪೂರ್ಣ ಕಾರವಾರ-ಮಂಗಳೂರು- ಬೆಂಗಳೂರು ಮಾರ್ಗ ವಿದ್ಯುದೀಕರಣ ಪೂರ್ಣಗೊಂಡು ವಂದೇ ಭಾರತ್ ಕನಸು ಹತ್ತಿರವಾಗಿತ್ತು.
ಕಳೆದ ವರ್ಷ ಬೆಂಗಳೂರಿಗೆ ಬೇಟಿ ನೀಡಿದ್ದ ಸಚಿವ ಅಶ್ವಿನ್ ವೈಷ್ಣವ್ ಬೆಂಗಳೂರು ಮಂಗಳೂರು ಮಾರ್ಗವಾಗಿ ಮಡಗಾಂವ್ ತನಕ ವಂದೇ ಭಾರತ್ ಓಡಿಸುವ ತೀರ್ಮಾನ ಪ್ರಕಟಿಸಿದ್ದರು. ಅದಾಗಲೇ ಮಂಗಳೂರು ಮಡಗಾಂವ್ ನಡುವೆ ವಂದೇ ಭಾರತ್ ರೈಲು ಸೇವೆ ಇದ್ದ ಕಾರಣ, ಬೆಂಗಳೂರು ಮಂಗಳೂರು ನಡುವೆ ಹಲವು ಬಾರಿ ವಂದೇ ಭಾರತ್ ರೈಲಿನ ಪರೀಕ್ಷಾರ್ಥ ಓಡಾಟ ನಡೆಸಲಾಗಿತ್ತು. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ನವೆಂಬರ್ 13 ರಂದು ರಾಜ್ಯದ ಕರಾವಳಿ ಭಾಗಕ್ಕೆ ಸಮರ್ಪಣೆ ಆಗುತ್ತಿರುವ ವಂದೇ ಭಾರತ್ ರೈಲಿನ ಓಡಾಟದಿಂದ ಕರಾವಳಿ ಮತ್ತು ಬೆಂಗಳೂರು ಬೆಸೆದ ಅನುಭವವಾಗಿದೆ ಎಂದ ಸಂಸದ ಕೋಟ, ಕರಾವಳಿಯ ಪ್ರಯಾಣಿಕರ ಬಹು ದಿನದ ಬೇಡಿಕೆ ವಂದೇ ಭಾರತ್ ಮೂಲಕ ಈಡೇರಿದರಿಂದ ತನ್ನ ಜವಾಬ್ದಾರಿ ನಿರ್ವಹಿಸಿದ ರೀತಿ ಸಮಾಧಾನ ತಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೇಗುಲಗಳ ತವರು, ಶಿಕ್ಷಣ ಕಾಶಿ, ಹೋಟೇಲ್ ಮತ್ತು ಪ್ರವಾಸೋಧ್ಯಮದ ಕೇಂದ್ರ, ಸೀಬರ್ಡ್ ನೌಕಾ ನೆಲೆ ಮತ್ತು ಕೈಗಾ ಅಣು ಸ್ಥಾವರದಂತ ರಾಷ್ಟ್ರೀಯ ಪ್ರಾಮುಖ್ಯತೆಯ ಕರ್ನಾಟಕ ಕರಾವಳಿಯನ್ನು ರಾಜದಾನಿ ಬೆಂಗಳೂರಿನ ಜತೆ ಆಧುನಿಕ ಭಾರತದ ಆಧುನಿಕ ರೈಲು ವಂದೇ ಭಾರತ್ ಮೂಲಕ ಬೆಸೆಯಬೇಕು ಎನ್ನುವ ಹಲವು ವರ್ಷಗಳ ಬೇಡಿಕೆ ಈಗ ಈಡೇರಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

















