ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯಕ್ಷಗಾನ ಸಂಘ ಹಾಗೂ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ‘ಬಣ್ಣದ ಮನೆ – ಯಕ್ಷಗಾನ ಕಲಾವಿದರ ಬದುಕಿಗೆ ನುಡಿ ತೋರಣ’ ಎನ್ನುವ ಸರಣಿ ಉಪನ್ಯಾಸ ಮಾಲಿಕೆಯ ಉದ್ಘಾಟನಾ ಕಾರ್ಯಕ್ರಮ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು.
ಚಂಡೆ ವಾದನದ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕುಂದಾಪುರದ ನ್ಯಾಯವಾದಿ ಹಾಗೂ ಪ್ರಸಂಗಕರ್ತ ಶರತ್ ಕುಮಾರ್ ಶೆಟ್ಟಿ ಮಾತನಾಡಿ, ‘ಬಣ್ಣದ ಮನೆ’ ಎಂಬುದು ಯಕ್ಷಗಾನದ ಕಲಾವಿದರನ್ನು ರೂಪಿಸುವ, ಕಲೆಯ ಪರಂಪರೆ ಮತ್ತು ಅನುಭವಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ವಿಶಿಷ್ಟ ಪರಿಕಲ್ಪನೆಯಾಗಿದೆ. ಇದು ಯಕ್ಷಗಾನದ ವಿಶ್ವವಿದ್ಯಾನಿಲಯವಿದ್ದಂತೆ. ಇಲ್ಲಿ ಕಲೆಯ ಬಗ್ಗೆ ಆಳವಾದ ಆಸಕ್ತಿ, ಸೃಜನಶೀಲ ಚಿಂತನೆ ಹಾಗೂ ನಿರಂತರ ಕಲಿಕೆಯ ಮನೋಭಾವದೊಂದಿಗೆ ತೊಡಗಿಸಿಕೊಂಡಾಗ ಉತ್ತಮ ಕಲಾವಿದರಾಗಿ ರೂಪುಗೊಳ್ಳಲು ಸಾಧ್ಯ.
ಹಿರಿಯ ಕಲಾವಿದರ ಒಡನಾಟ, ಅವರ ಅನುಭವಗಳ ಅರಿವು ಮತ್ತು ಕಲಾಸಾಧನೆಯ ಹಾದಿಯನ್ನು ತಿಳಿದುಕೊಳ್ಳುವುದು ಯುವ ಕಲಾವಿದರಿಗೆ ಅಮೂಲ್ಯ ಮಾರ್ಗದರ್ಶನವಾಗುತ್ತದೆ. ವಿದ್ಯಾರ್ಥಿಗಳು ಯಕ್ಷಗಾನ ಕಲಾವಿದರ ಬದುಕು, ಸಾಧನೆ ಹಾಗೂ ಕಲಾ ಕೊಡುಗೆಗಳನ್ನು ಪರಿಚಯಿಸಿಕೊಳ್ಳುವುದರ ಜೊತೆಗೆ ತಮ್ಮೊಳಗೆ ಯಕ್ಷಗಾನದ ಬಗ್ಗೆ ಆಸಕ್ತಿ ಮತ್ತು ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಇಂತಹ ಉಪನ್ಯಾಸ ಮಾಲಿಕೆಗಳು ಕಲಾವಿದರ ಬದುಕಿನ ಸಾಧನೆಗಳನ್ನು ದಾಖಲಿಸುವುದರೊಂದಿಗೆ ಕಲೆಯ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿವೆ’ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಸಂಘದ ಸಂಯೋಜಕ, ಉಪ ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಪ್ರಸ್ತಾವಿಸಿ, ಸ್ವಾಗತಿಸಿದರು. ಯಕ್ಷಗಾನ ಸಂಘದ ವಿದ್ಯಾರ್ಥಿ ಪ್ರತಿನಿಧಿಗಳಾದ ಮೋಹಿತ್, ಮೇಘನಾ ಹಾಗೂ ಚಂಡೆ ವಾದಕ ಸಂಪ್ರೀತ್ ಶೆಟ್ಟಿ ಉಪಸ್ಥಿತರಿದ್ದರು.
ಸರಣಿ ಉಪನ್ಯಾಸ ಮಾಲಿಕೆಯ ಮೊದಲ ಉಪನ್ಯಾಸದಲ್ಲಿ, 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಕೋಟ ಸುರೇಶ ಬಂಗೇರ ಅವರನ್ನು ವಿದ್ಯಾರ್ಥಿನಿ ನಿಶ್ಮಿತಾ ಶೆಟ್ಟಿ ಪರಿಚಯಿಸಿದರು. ವಿದ್ಯಾರ್ಥಿ ಪ್ರಜಿತ್ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ಸಂಯೋಜಕ ರವಿನಂದನ್ ಭಟ್ ವಂದಿಸಿದರು. ಯುವ ಭಾಗವತೆ ಪಲ್ಲವಿ ಗಣಪತಿ ಸ್ತುತಿಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

















