ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರೈಲಿನಲ್ಲಿ ಪ್ರಯಾಣಿಕರ ಮೊಬೈಲ್ಗಳನ್ನು ಕಳವು ಮಾಡಿ, ಅದರ ಮೂಲಕ ಯುಪಿಐ ಬಳಸಿ ಹಣ ವರ್ಗಾವಣೆ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.ಬಂಧಿತನಿಂದ ಕಳವು ಮಾಡಲಾಗಿದ್ದ ಮೂರು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಾಸ್ತಾನ ಐರೋಡಿ ಗ್ರಾಮದ ಗೋಳಿಬೆಟ್ಟು ನಿವಾಸಿ ಪ್ರಹ್ಲಾದ್ (32) ಬಂಧಿತ ಆರೋಪಿ.
ಕಳೆದ ಆ.2ರಂದು ರುಬೆನ್ ಫೆರ್ನಾಂಡಿಸ್ ಎಂಬವರು ಮಂಗಳೂರಿನಿಂದ ಮಡಗಾಂವ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಬೆಳಗಿನ ಜಾವ ಸುಮಾರು 2 ಗಂಟೆಗೆ ಬೈಂದೂರು ರೈಲು ನಿಲ್ದಾಣದ ಸಮೀಪ ಅವರ ಬಳಿಯಿದ್ದ ಸುಮಾರು 17 ಸಾವಿರ ರೂ. ಮೌಲ್ಯದ ಮೊಬೈಲ್ನ್ನು ಅಪರಿಚಿತ ವ್ಯಕ್ತಿಯೊಬ್ಬ ಕಳವು ಮಾಡಿದ್ದ ಬಳಿಕ ಕಳವು ಮಾಡಿದ ಮೊಬೈಲ್ ಮೂಲಕ ಯುಪಿಐ ಬಳಸಿ 19,847 ರೂ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್ ಬಿ. ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ವಿಚಾರಣೆ ವೇಳೆ ಆರೋಪಿ, ತನ್ನ ಜೊತೆಗಾರ ಜೋಶಿ ನಾರಾಯಣ ನಾಯಕ್ ಎಂಬಾತನೊಂದಿಗೆ ಸೇರಿಕೊಂಡು ಆ.2ರಂದು ಬೈಂದೂರು ಸಮೀಪ ರೈಲಿನಲ್ಲಿ ಪ್ರಯಾಣಿಕರ ಸ್ಯಾಮ್ಸಂಗ್ ಮೊಬೈಲ್ ಹಾಗೂ ಅ.13ರಂದು ಐಫೋನ್ 16 ಪ್ರೊ ಮ್ಯಾಕ್ಸ್ ಮೊಬೈಲ್ ಕಳವು ಮಾಡಿರುವುದಾಗಿ ಬಾಯ್ದಿಟ್ಟಿದ್ದಾನೆ. ಅಲ್ಲದೆ, ಮಾ.06ರಂದು ಬೈಂದೂರು ಸಮೀಪದ ರೈಲಿನಲ್ಲಿ ಪ್ರಯಾಣಿಕರ ಐಕ್ಯೂ ಝಡ್9 ಮೊಬೈಲ್ ಕಳವು ಮಾಡಿರುವುದಾಗಿಯೂ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಕಾರವಾರ ಗ್ರಾಮೀಣ, ಬಂಟ್ವಾಳ ನಗರ, ಉಡುಪಿ ನಗರ, ಬ್ರಹ್ಮಾವರ, ಕೋಟ ಹಾಗೂ ಕುಂದಾಪುರ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಲಾಗಿರುವ ಕಳವು ಮತ್ತು ದರೋಡೆ ಪ್ರಕರಣಗಳಲ್ಲಿಯೂ ಆರೋಪಿ ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

















