ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೇಂದ್ರ ಸರ್ಕಾರದ ಪ್ರತಿಯೊಂದು ಮನೆಗೂ ನಳ್ಳಿ ನೀರು ಎನ್ನುವ ಮಹತ್ವಕಾಂಕ್ಷಿ ಯೋಜನೆಯಾದ ಜಲ ಜೀವನ್ ಮಿಷನ್ ಯೋಜನೆಯ ಕಳಪೆ ಕಾಮಗಾರಿ ಹಾಗೂ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣದ ದುರುಪಯೋಗದ ಬಗ್ಗೆ ಸಂಸದರು ಹಾಗೂ ಶಾಸಕರುಗಳು ಮೌನವಹಿಸಿರುವ ಕಾರಣವೇನೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಪ್ರಶ್ನಿಸಿದ್ದಾರೆ.
ಪ್ರತಿಯೊಂದು ಗ್ರಾಮ ಪಂಚಾಯತುಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಕೋಟ್ಯಂತರ ರೂಪಾಯಿ ಅನುದಾನದಡಿ ಪೈಪ್ ಲೈನ್, ನೀರು ಶೇಖರಣ ಟ್ಯಾಂಕ್, ಮನೆ ಮುಂದೆ ನಳ್ಳಿ ಅಳವಡಿಸಲಾಗಿದೆ ಬಿಟ್ಟರೆ ಯಾವ ನಳ್ಳಿಯಲ್ಲೂ ಒಂದು ಹನಿ ನೀರು ಬರುತ್ತಿಲ್ಲ. ಹೆಚ್ಚಿನ ಕಡೆ ಈ ಕಾಮಗಾರಿ ಹೆಸರಲ್ಲಿ ಗುಣಮಟ್ಟದ ಕಾಂಕ್ರೀಟ್ ರಸ್ತೆಗಳನ್ನು ಅಗೆದು ಹಾಕಿ ಅದನ್ನು ಕೂಡ ಸರಿ ಪಡಿಸದೆ ಹಾಗೆಯೇ ಬಿಡಲಾಗಿದೆ.
ಇನ್ನು ಎಷ್ಟೋ ಕಡೆ ನೀರಿನ ಮೂಲಗಳನ್ನೇ ಗುರುತಿಸದೆ ನೀರು ಶೇಖರಣ ಟ್ಯಾಂಕ್ ನಿರ್ಮಾಣ ಮಾಡಿ ಈಗ ನೀರಿಲ್ಲದೆ ಟ್ಯಾಂಕ್ ಗಳು ಬಿಸಿಲಿನಲ್ಲಿ ಒಣಗುತ್ತಿವೆ. ಪ್ರತಿ ಗ್ರಾಮ ಪಂಚಾಯತುಗಳಲ್ಲಿ ಜಲ ಜೀವನ್ ಮಿಷನ್ ಯೋಜನೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ದುರುಪಯೋಗವಾಗಿದ್ದು ಇದೊಂದು ಸಾರ್ವಜನಿಕ ಹಣ ದುರುಪಯೋಗದ ಗಂಭೀರ ಪ್ರಕರಣವಾಗಿದ್ದು ಈ ಹಗರಣದ ತನಿಖೆಗೆ ಸರ್ಕಾರ ಕೂಡಲೇ ಒಂದು ವಿಶೇಷ ತನಿಖಾ ತಂಡ ರಚನೆ ಮಾಡಬೇಕು ಹಾಗೂ “ನಾನು ತಿನ್ನುವುದಿಲ್ಲ ಹಾಗೂ ಬೇರೆಯವರಿಗೆ ತಿನ್ನಲು ಬಿಡುವುದಿಲ್ಲ ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಅನುಯಾಯಿಗಳಾದ ಉಡುಪಿ ಜಿಲ್ಲೆಯ ಬಿಜೆಪಿ ಸಂಸದರು ಹಾಗೂ ಶಾಸಕರುಗಳು ಜೆ ಜೆ ಎಂ ಯೋಜನೆಯಲ್ಲಿನ ಕಳಪೆ ಕಾಮಗಾರಿ ಹಾಗೂ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ದುರುಪಯೋಗದ ಬಗ್ಗೆ ಇನ್ನಾದರೂ ಮೌನ ಮುರಿಯಲಿ ಎಂದು ಅವರು ಆಗ್ರಹಿಸಿದ್ದಾರೆ.












