ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಮತ್ತು ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕನ್ನಡಾಂಬೆಗೆ ಹಟ್ಟಿಅಂಗಡಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಪುಷ್ಪಾರ್ಪಣೆ ಸಲ್ಲಿಸಿ, ಮಾತನಾಡಿ, ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು. ಭವಿಷ್ಯದ ನಾಯಕರು. ಜಪಾನ್, ರಷ್ಯಾದಂತಹ ರಾಷ್ಟ್ರಗಳಲ್ಲಿ ಮಾತೃಭಾಷೆಯನ್ನು ಬಿಟ್ಟು ಬೇರೆ ಭಾಷೆಯನ್ನು ಜನ ನುಡಿಯದೆ ತಮ್ಮ ಸ್ವಾಭಿಮಾನವನ್ನು ತೋರಿಸಿಕೊಡುತ್ತಿದ್ದಾರೆ. ಕರ್ನಾಟಕದಲ್ಲಿ ನಾವು ಕನ್ನಡ ಮಾತಾಡಲು ಹಿಂಜರಿಯುತ್ತಿದ್ದೇವೆ. ನಾವಿಂದು ಮಕ್ಕಳಿಗೆ ಈ ನೆಲ, ನುಡಿಗಳ ಬಗ್ಗೆ ತಿಳಿಸಲು ಅನುಕೂಲವಾದ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿರುತ್ತೇವೆ.
ಮಕ್ಕಳು ಉದ್ಯೋಗಾದಿಗಳಿಗಾಗಿ ಅನಿವಾರ್ಯವಾಗಿ ಇಂಗ್ಲೀಷ್ ಭಾಷೆಯನ್ನು ಚೆನ್ನಾಗಿ ಅಭ್ಯಾಸ ಮಾಡಬೇಕಾಗಿದ್ದರಿಂದ ನಾವು ಇಂಗ್ಲೀಷ್ಗೆ ಒತ್ತು ನೀಡುತ್ತಿದ್ದೇವೆ. ಆದರೂ, ಹುಟ್ಟಿದ ನೆಲದ ನುಡಿಯನ್ನು ಎಂದಿಗೂ ಮರೆಯಬಾರದು. ನಮ್ಮ ನೆಲದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಎನ್ನುತ್ತಾ ಕನ್ನಡದ ಸಂಸ್ಕೃತಿಯ ಪರಿಚಯಗೈಯ್ದರು.
ಈ ಸಮಯದಲ್ಲಿ ಶಾಲಾ ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಕನ್ನಡ ರಾಜ್ಯವಾದ ಕರ್ನಾಟಕ ಹೇಗೆ ಸಂರಚನೆ ಆಗಿದೆ, ಎಷ್ಟೊಂದು ಹಿರಿಯರ ಕೊಡುಗೆ ಇದೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿ ತಿಳಿ ಹೇಳಿದರು. ನಂತರ ಶಾಲೆಯ ಕೆಲವಷ್ಟು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕನ್ನಡದ ಹಿರಿಮೆಯ ಪದ್ಯಗಳನ್ನು ಹಾಡಿದರೆ, ಇನ್ನು ಕೆಲವಷ್ಟು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೆಮ್ಮೆಯ ಕನ್ನಡ ಹಾಡುಗಳಿಗೆ ಹೆಜ್ಜೆಯನ್ನಿಡುತ್ತಾ, ಎಲ್ಲರ ಮನಗಳನ್ನು ರಂಜಿಸಿದರು.
ವಿದ್ಯಾರ್ಥಿನಿ ಪ್ರಿಯಾಂಕಾ ಕಾರ್ಯಕ್ರಮವನ್ನು ನಿರ್ವಹಿಸಿ, ವಂದಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಮ್., ಮತ್ತು ಶಿಕ್ಷಕ, ಶಿಕ್ಷಕೇತರವೃಂದ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.














