ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದಲ್ಲಿ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ ಮಂಗಳವಾರ ಸಡಗರ ಸಂಭ್ರಮದಿಂದ ಜರುಗಿತು. ಬೆಳಗ್ಗೆ ತಂತ್ರಿಗಳು ಶ್ರೀದೇವರ ರಥಾರೋಹಣ ಪೂರ್ವ ವಿಧಿಗಳನ್ನು ನೆರವೇರಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀದೇವರಿಗೆ ಶತರುದ್ರಾಭಿಷೇಕ ಇನ್ನಿತರ ಧಾರ್ಮಿಕ ವಿಧಿ ನಡೆದ ಬಳಿಕ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಭವ್ಯ ರಥೋತ್ಸವ ನಡೆಯಿತು. ಅಪಾರ ಸಂಖ್ಯೆಯ ಜನಸ್ತೋಮ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀಕೋಟಿಲಿಂಗೇಶ್ವರ ದೇವರ ದರ್ಶನ ಪಡೆದು ಪುನೀತರಾದರು. ಸಂಜೆ ಬಸವನಗುಡಿ ಸನ್ನಿಧಿಯಿಂದ ಶ್ರೀದೇವರಿಗೆ ಅಭಿಮುಖವಾಗಿ ರಥ ಏಳೆದ ಬಳಿಕ ರಥಾಅವರೋಹಣದ ವಿಧಿ ಸಮಾಪನಗೊಂಡವು.

ದೇವಳದ ರಥೋತ್ಸವದ ಸಂದರ್ಭ ಗರುಡ ದರ್ಶನ ಆಗುವುದು ವಾಡಿಕೆ. ಈ ಭಾರಿ ಡ್ರೋನ್ ಹಾರಾಟ ಹೆಚ್ಚಿದ್ದು ಗರುಡ ಸಂಚಾರಕ್ಕೆ ಅಡಚಣೆಯಾಯಿತು ಎನ್ನಲಾಗಿದೆ.
ನವ ವಧುವರರು ವಾಡಿಕೆಯಂತೆ ಹಬ್ಬಕ್ಕೆ ಬಂದು ಕೊಡಿ (ಕಬ್ಬು) ಕೊಂಡು ದೇವರಿಗೆ ಪೂಜೆ ಸಲ್ಲಿಸಿದರು. ನವದಂಪತಿ ಕೊಡಿ ಹಬ್ಬದ ದಿನದಂದು ದೇವರ ದರ್ಶನ ಮಾಡಿ ಕಬ್ಬಿನ ಕೊಡಿ (ಜಲ್ಲೆ) ಕೊಂಡೊಯ್ದರೆ ಅವರ ಬಾಳಿನಲ್ಲಿ ಕೊಡಿ ಅರಳುತ್ತದೆ ಎನ್ನುವ ನಂಬಿಕೆ ಇದೆ.
ವಿವಿಧ ಹರಕೆ ಕಟ್ಟಿಕೊಂಡವರು ಸುತ್ತಕ್ಕಿ ಸೇವೆ ನೀಡುವುದು ವಾಡಿಕೆಯಾಗಿದ್ದು, ದೇವಸ್ಥಾನಕ್ಕೆ ಹೊಂದಿಕೊಂಡಂತೆ ಇರುವ ಸುಮಾರು ನಾಲ್ಕು ಎಕ್ರೆ ವಿಸ್ತೀರ್ಣದ ‘ಕೋಟಿ ತೀರ್ಥ’ ಪುಷ್ಕರಣಿಯ ಸುತ್ತ ಅಪೇಕ್ಷಿತರು ಬಿಳಿಯ ಬಟ್ಟೆಯನ್ನು ಹಾಕಿ ಕುಳಿತುಕೊಳ್ಳುತ್ತಾರೆ. ಭಕ್ತಾಧಿಗಳು ಪುಷ್ಕರಣಿಯಲ್ಲಿ ಮುಳುಗೆದ್ದು ಬಿಳಿ ಬಟ್ಟೆಹಾಸಿನ ಮೇಲೆ ಅಕ್ಕಿಯನ್ನು ಚೆಲ್ಲಿ ಹರಕೆ ಸಲ್ಲಿಸುತ್ತಾರೆ.
ಕೊಡಿಹಬ್ಬದ ಅಂಗವಾಗಿ ನಗರದ ಬೀದಿಗಳು ಸಿಂಗಾರಗೊಂಡಿದ್ದು ದೇವಸ್ಥಾನ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಿತ್ಯವೂ ಜರುಗುತ್ತಿದೆ. ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಹಬ್ಬದ ಸಲುವಾಗಿ ಕುಂದಾಪುರ ಡಿ.ಎಸ್ಪಿ ನೇತೃತ್ವದಲ್ಲಿ ರಥೋತ್ಸವದಂದು ಬಿಗಿ ಪೊಲೀಸ್ ಬಂದೋವಸ್ತ್ ಮಾಡಲಾಗಿತ್ತು.














