ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಪ್ರೌಢಶಾಲಾ ವಾರ್ಷಿಕ ಕ್ರೀಡಾಕೂಟವು ಸಂಪನ್ನಗೊಂಡಿತು.
14 ಮತ್ತು 17ರ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಉದ್ದಜಿಗಿತ, ಗುಂಡೆಸೆತ, 100ಮೀ, 200ಮೀ, 400ಮೀ, 800ಮೀ, 1500ಮೀ ಓಟ ಮತ್ತು ರಿಲೇ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು.
ಈ ಕ್ರೀಡಾಕೂಟದಲ್ಲಿ ಮುಖ್ಯಅತಿಥಿಗಳ ನೆಲೆಯಲ್ಲಿ ಉಪಸ್ಥಿತರಿದ್ದ ಶ್ರೀ ವೆಂಕಟ್ರಮಣ ಪಿಯು ಕಾಲೇಜು ಕುಂದಾಪುರದ ಪ್ರಾಂಶುಪಾಲರಾದ ಸಂದೀಪ್ ಗಾಣಿಗರು ಉದ್ಘಾಟನೆ ನಡೆಸಿ ಮಾತನಾಡಿ, ದೈಹಿಕ ಆರೋಗ್ಯಕ್ಕಾಗಿ, ಮಾನಸಿಕ ನೆಮ್ಮದಿಗಾಗಿ, ಶಿಸ್ತು, ಸಂಯಮ, ಸಮಯಪ್ರಜ್ಞೆ ಮತ್ತು ಒಗ್ಗಟ್ಟುಗಳಿಗಾಗಿ ಕ್ರೀಡೆ ಅತ್ಯವಶ್ಯ. ಭಾಗವಹಿಸುವುದೇ ದೊಡ್ಡ ಗೆಲುವು. ಗೆದ್ದಾಗ ಸಿಗೋ ಸಂತೋಷ ಅನುಭವಿಸಬೇಕು. ಅಹಂಕಾರ ಪಡಬಾರದು, ಸೋತಾಗ ಮುಂದಿನ ಅವಕಾಶಕ್ಕಾಗಿ ಕಾಯಬೇಕು. ಮಿಲ್ಕಾ ಸಿಂಗ್ ಇದಕ್ಕೆ ಅತ್ಯುತ್ತಮ ಉದಾಹರಣೆ ಎನ್ನುತ್ತಾ ಮಕ್ಕಳನ್ನು ಹುರಿದುಂಬಿಸಿದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಕ್ರೀಡೆಗಳಲ್ಲಿ ಭಾಗವಹಿಸುವುದೆಂದರೆ ಆ ಕ್ರೀಡೆಯಲ್ಲಿ ಗುರಿ ತಲುಪುವುದು. ಪ್ರಥಮಾದಿ ಸ್ಥಾನ ಪಡೆಯದಿದ್ದರೂ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಆಗಷ್ಟೇ ನಮ್ಮ ಕ್ರೀಡಾಕೂಟದ ಆಯೋಜನೆ ಸಾರ್ಥಕವಾಗುವುದು. ಎಂದರು.
ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಂ, ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಶಾಲಾ ಸಂಯೋಜಕರು ಮತ್ತು ಶಿಕ್ಷಕವೃಂದದವರು ವಿದ್ಯಾರ್ಥಿಗಳಿಗೆ ಪದಕ ಮತ್ತು ಪ್ರಮಾಣಪತ್ರಗಳನ್ನು ಹಸ್ತಾಂತರಿಸಿ ಹುರಿದುಂಬಿಸಿದರು. ಶಿಕ್ಷಕಿ ಅಶ್ವಿನಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿನಿ ಪೂರ್ವಿಕಾ ಎಲ್. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಯುಕ್ತಾ ಸ್ವಾಗತಿಸಿ, ಕುಶಾಲ್ ವಂದಿಸಿದರು.














