ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ರೋಟರಿ ಕ್ಲಬ್ ತೆಕ್ಕಟ್ಟೆಯ ಆತಿಥ್ಯದಲ್ಲಿ ವಲಯ 2ರ ವಲಯ ಮಟ್ಟದ ಒಳಾಂಗಣ ಕ್ರೀಡಾಕೂಟ “ಸ್ನೇಹ ರಥ – 2026” ಕಾರ್ಯಕ್ರಮವು ಶುಕ್ರವಾರ ಕೋಟೇಶ್ವರದ ಅಂಕದಕಟ್ಟೆಯ ಸಹನಾ ಅಕ್ವಾಟಿಕ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಗ್ರಾಮೀಣ ಕ್ರೀಡಾ ವಿಭಾಗದ ಅಧ್ಯಕ್ಷರಾದ ರಾಜೇಂದ್ರ ಸುವರ್ಣ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ರೋಟರಿ ಸಂಸ್ಥೆಯು ಸದಸ್ಯರ ನಡುವೆ ಸ್ನೇಹ, ಸೌಹಾರ್ದತೆ ಮತ್ತು ಪರಸ್ಪರ ಬಾಂಧವ್ಯವನ್ನು ವೃದ್ಧಿಸುವ ಉದ್ದೇಶದಿಂದ ಕ್ರೀಡಾಕೂಟಗಳನ್ನು ಆಯೋಜಿಸುತ್ತಿರುವುದನ್ನು ಪ್ರಶಂಸಿಸಿದರು. ಕ್ರೀಡಾಪಟುವೊಬ್ಬನು ವಿಜಯವನ್ನು ಸಾಧಿಸುವ ಮೊದಲು ಸೋಲನ್ನು ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಏಕೆಂದರೆ ಸೋಲು ಮತ್ತು ಗೆಲುವು ಎರಡೂ ಕ್ರೀಡೆಯ ಅವಿಭಾಜ್ಯ ಅಂಗಗಳಾಗಿವೆ ಎಂದು ತಿಳಿಸಿದರು.

ರೋಟರಿ ಕ್ಲಬ್ ತೆಕ್ಕಟ್ಟೆಯ ಅಧ್ಯಕ್ಷರಾದ ಟಿ. ರಾಜೀವ್ ಶೆಟ್ಟಿ ಅವರು ಗಣ್ಯರನ್ನು ಹಾಗೂ ಭಾಗವಹಿಸಿದ ಎಲ್ಲ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ತಮ್ಮ ಸ್ವಾಗತ ಭಾಷಣದಲ್ಲಿ ಸ್ಪರ್ಧಿಗಳು ತೀರ್ಪುಗಾರರ ನಿರ್ಧಾರವನ್ನು ಗೌರವಿಸಬೇಕು ಹಾಗೂ ನಿಗದಿಪಡಿಸಿದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಬೇಕೆಂದು ವಿನಂತಿಸಿದರು.
ಸಹಾಯಕ ಗವರ್ನರ್ ಟಿ. ಸುಧಾಕರ ಶೆಟ್ಟಿ ಅವರು ಎಲ್ಲ ಸ್ಪರ್ಧಿಗಳು ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಿ, ಸ್ನೇಹ, ಒಗ್ಗಟ್ಟು ಮತ್ತು ಪರಸ್ಪರ ಗೌರವವನ್ನು ಕಾಪಾಡಿಕೊಂಡು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಲಯ ಕಾರ್ಯದರ್ಶಿ ನಾಯಕ ಸುರೇಶ ಬೇಳೂರು, ವಲಯ ಸಲಹೆಗಾರ ಗಜೇಂದ್ರ ಶೆಟ್ಟಿ, ವಲಯ ಲೆಫ್ಟಿನೆಂಟ್ ತಿಮ್ಮ ಪೂಜಾರಿ, ವಲಯ ಕಾರ್ಯದರ್ಶಿ ಎಚ್. ಜಗದೀಶ್ ಹಾಗೂ ಸಹಾಯಕ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು. ಇವರೊಂದಿಗೆ ವಲಯ 2ರ ವಿವಿಧ ರೋಟರಿ ಕ್ಲಬ್‌ಗಳ ಸದಸ್ಯರು ಹಾಗೂ ಸ್ಪರ್ಧಿಗಳು ಭಾಗವಹಿಸಿದ್ದರು.
ರಾಘವೇಂದ್ರ ದೇವಾಡಿಗ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ವಲಯ ಕ್ರೀಡಾ ಸಂಯೋಜಕರಾದ ಸುಧೀರ ಮಲ್ಯಾಡಿ ಅವರು ವಂದನಾರ್ಪಣೆ ಸಲ್ಲಿಸಿದರು.
ವಲಯ 2ರ ಎಲ್ಲಾ ರೋಟರಿ ಕ್ಲಬ್‌ಗಳ ಉತ್ಸಾಹಭರಿತ ಭಾಗವಹಿಸುವಿಕೆಯಿಂದ ಒಳಾಂಗಣ ಕ್ರೀಡಾಕೂಟವು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಈ ಕ್ರೀಡಾಕೂಟವು ರೋಟರಿ ಸದಸ್ಯರ ನಡುವೆ ಸ್ನೇಹ ಮತ್ತು ಬಾಂಧವ್ಯವನ್ನು ಗಟ್ಟಿಗೊಳಿಸುವುದರ ಜೊತೆಗೆ ಆರೋಗ್ಯಕರ ಸ್ಪರ್ಧಾ ಮನೋಭಾವ ಹಾಗೂ ಒಗ್ಗಟ್ಟಿನ ಸಂದೇಶವನ್ನು ಸಾರುವ ಉತ್ತಮ ವೇದಿಕೆಯಾಯಿತು.














