ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: “ವಸುದೈವ ಕುಟುಂಬಕಮ್” – ಇಡೀ ಜಗತ್ತೇ ಒಂದು ಕುಟುಂಬ, ಪ್ರೀತಿಯೇ ಅದರ ಬಂಧ, ಮಾನವೀಯತೆಯೇ ಅದರ ಧರ್ಮ ಎಂಬ ಉದಾತ್ತ ಸಂದೇಶವನ್ನು ಸಾರುವ ಆಶಯದೊಂದಿಗೆ ಸುಜ್ಞಾನ ನ್ಯಾಷನಲ್ ಪಿಯು ಕಾಲೇಜು ಬಾರ್ಕೂರು ಇದರ 2026–27ನೇ ಶೈಕ್ಷಣಿಕ ಸಾಲಿನ ವಾರ್ಷಿಕೋತ್ಸವವು ಇತ್ತೀಚೆಗೆ ಕಾಲೇಜಿನ ಆವರಣದಲ್ಲಿ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಜರುಗಿತು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಣಿಪಾಲ ಎಂ.ಐ.ಟಿ.ಯ ಶೈಕ್ಷಣಿಕ ವಿಭಾಗದ ನಿರ್ದೇಶಕರಾದ ಡಾ. ರವಿಪ್ರಕಾಶ್ ವೈ. ಮಾತನಾಡಿ, “ಸಕಾರಾತ್ಮಕ ಚಿಂತನೆಯೇ ಯಶಸ್ಸಿನ ಮೊದಲ ಹೆಜ್ಜೆ. ಜೀವನದಲ್ಲಿ ಹಲವು ಅವಕಾಶಗಳ ಬಾಗಿಲುಗಳು ತೆರೆಯುತ್ತವೆ; ಅವುಗಳಲ್ಲಿ ಸರಿಯಾದದ್ದನ್ನು ಆಯ್ಕೆ ಮಾಡುವ ಜಾಣ್ಮೆ ವಿದ್ಯಾರ್ಥಿಗಳದ್ದಾಗಿರಬೇಕು” ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಷನಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಮಾತನಾಡಿ, “ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ವೇದಿಕೆಗಳು ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದರೊಂದಿಗೆ ಸಹಬಾಳ್ವೆ ಹಾಗೂ ಸಾಮರಸ್ಯದ ಮೌಲ್ಯಗಳನ್ನು ಬೆಳೆಸುತ್ತವೆ” ಎಂದರು.


ಟ್ರಸ್ಟ್‌ನ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, ಸಿಗುವ ಪ್ರತಿಯೊಂದು ವೇದಿಕೆಯನ್ನು ಆತ್ಮವಿಶ್ವಾಸದಿಂದ ಸದುಪಯೋಗಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಆಚಾರ್ಯ ವಾರ್ಷಿಕ ವರದಿಯನ್ನು ವಾಚಿಸಿದರು.
ಸಭಾ ಕಾರ್ಯಕ್ರಮದ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ವಿವಿಧ ಕಲಾಪ್ರಕಾರಗಳ ಸಂಗಮವಾಗಿ ಮೂಡಿಬಂದಿತು. ಭಾರತದ ವಿವಿಧ ರಾಜ್ಯಗಳ ಸಂಸ್ಕೃತಿ, ವೇಷಭೂಷಣ ಹಾಗೂ ಜನಜೀವನವನ್ನು ಪ್ರತಿಬಿಂಬಿಸುವ ನೃತ್ಯರೂಪಕಗಳು ಮತ್ತು ಏಕಪಾತ್ರಾಭಿನಯಗಳು ಪ್ರೇಕ್ಷಕರ ಮನಸೂರೆಗೊಂಡವು. ಕರಾವಳಿಯ ಜನಪದ ಸೊಗಡಿನ ಹುಲಿಕುಣಿತ ಹಾಗೂ ಗಂಡುಕಲೆ ಯಕ್ಷಗಾನದ ‘ಕಂಸವಧೆ’ ಪ್ರಸಂಗವು ರಂಗವೈಭವ ಮತ್ತು ಅಭಿನಯದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಉಪನ್ಯಾಸಕಿ ಸೌಮ್ಯ ಕೊಠಾರಿ ಸ್ವಾಗತಿಸಿ, ತನುಜಾ ಉಪಾಧ್ಯ ನಿರೂಪಿಸಿ, ಉಪನ್ಯಾಸಕಿ ಅನುಪಮ ಶೆಟ್ಟಿ ವಂದಿಸಿದರು.














