ಬೈಂದೂರು: ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ರಾಜ್ಯದ ಬರಗಾಲ, ಬತ್ತಿರುವ ಜಲಾಶಯ ಹಾಗೂ ರೈತ ಆತ್ಮಹತ್ಯೆಯ ಕಾರಣವೊಡ್ಡಿ ವಿಶೇಷ ಅನುದಾನ ನೀಡುವಂತೆ ವಿನಂತಿ ಮಾಡಿಕೊಂಡಿದ್ದೆವು. ಅದರಂತೆ ಕರ್ನಾಟಕ ರಾಜ್ಯಕ್ಕೆ 1540ಕೋಟಿ ಅನುದಾನ ಬಿಡುಗಡೆಯಾಗಿದೆ. ಪ್ರಧಾನಮಂತ್ರಿಗಳಿಗೆ ಸದಾ ಬೆಟ್ಟು ತೋರಿಸಿ ಟೀಕೆ ಮಾಡುವ ಸಿದ್ಧರಾಮಯ್ಯನವರು ಇನ್ನಾದರೂ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ರಾಜ್ಯದ ಜನರ ನೋವಿಗೆ ಸ್ಪಂದಿಸಲಿ ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಿ. ಎಸ್. ಯಡಿಯೂರಪ್ಪ ಸಲಹೆಯಿತ್ತರು.
ಭಾನುವಾರ ಬೈಂದೂರು ಬೈಪಾಸ್ ಬಳಿ ಬಿಜೆಪಿ ಬೈಂದೂರು ಘಟಕ ಆಯೋಜಿಸಿದ್ದ ಕಾರ್ಯಕರ್ತರ ಸಾರ್ವಜನಿಕ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಭಿನಂದಿಸಿ ಬಳಿಕ ಮಾತನಾಡಿದರು. ಕರ್ನಾಟಕದ ಕಾಂಗ್ರೆಸ್ ಸರಕಾರ ಬದುಕಿದೆಯೋ ಸತ್ತಿದೆಯೋ ಎಂಬ ಅನುಮಾನ ಕಾಡುತ್ತಿದೆ. ಆಡಳಿತ ಯಂತ್ರ ನಿಧಾನಗತಿಯಲ್ಲಿ ಸಾಗುತ್ತಿದೆ. ಅಹಿಂದ್ ಸರಕಾರ ಎಂದು ಹೇಳಿಕೊಳ್ಳುತ್ತಿದ್ದ ಮುಖ್ಯಮಂತ್ರಿಗಳು ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಸೇರಬೇಕಾದ ಹಣವನ್ನು ಇಲಾಖೆಯಲ್ಲಿಯೇ ಉಳಿಸಿಕೊಂಡು ಅಧಿಕಾರಿಗಳ ಮೇಲೆ ರೇಗಾಡುತ್ತಿರುವುದು ಮತ್ತೆ ಅಹಿಂದ್ ಜನರ ವಿಶ್ವಾಸ ಪಡೆಯುವ ತಂತ್ರವೇ ಎಂದವರು ಛೇಡಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ರೈತರಿಗಾಗಿ ಅಗ್ಗದ ಬೆಳೆ ವಿಮೆ ಮಾಡಿದ್ದಾರೆ. ವಿದ್ಯಾವಂತ ಯುವಕರಿಗಾಗಿ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದಾರೆ. ದೇಶದ ಅಭಿವೃದ್ಧಿಯನ್ನು ಸಹಿಸದೇ ಕಾಂಗ್ರೆಸ್ ಕಾರ್ಯಕಲಾಪಗಳಿಗೆ ಅಡ್ಡಿ ಪಡಿಸುತ್ತಾ ಬಂದಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಭಿನಂದನೆ ಸ್ವೀಕರಿಸಿ ಮಾತನಾಡಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಮಾಡಿದ್ದ ತಾಲೂಕು ಘೋಷಣೆಯನ್ನು ಈವರೆಗೂ ಕಾರ್ಯರೂಪಕ್ಕೆ ತರದೇ ಕಾಂಗ್ರೆಸ್ ಮುಂದೂಡುತ್ತಾ ಬಂದಿದೆ. ಅದನ್ನು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದೇ ಮಾಡಲಿ ಎಂದು ಕಾಯುತ್ತಿದೆಯೇ ಎಂದು ಪ್ರಶ್ನಿಸಿದ ಅವರು ಸರಕಾರಕ್ಕೆ ಬದ್ಧತೆ ಇದ್ದರೇ 94ಸಿಯಲ್ಲಿನ ತೊಡಕುಗಳನ್ನು ನಿವಾರಿಸಿ ಇಲ್ಲದಿದ್ದರೇ ತೊಂದರೆಗೊಳಗಾದ ಬಡವರೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಮುತ್ತಿಗೆ ಹಾಕಲಾಗುವುದು ಎಂದರು.
ಉಡುಪಿ ಚಿಕ್ಕಮಂಗಳೂರು ಕ್ಷೇತ್ರ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯ ಸೋಲಿನ ಭಯ ಆರಂಭಗೊಂಡಿದೆ. ಹಾಗಾಗಿ ಚುನಾವಣಾ ದಿನಾಂಕವನ್ನು ಮುಂದೂಡುತ್ತಲೇ ಬರುತ್ತಿದೆ. ಅಷ್ಟರೊಳಗೆ ಬಜೆಟ್ ಫೋಷಿಸಿ ಚುನಾವಣೆ ಎದುರಿಸುವ ತಂತ್ರ ರೂಪಿಸುತ್ತಿದೆ. ಆದರೆ ಚುನಾವಣಾ ಆಯೋಗ ಹಾಗೂ ನ್ಯಾಯಲಯ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಲು ಆದೇಶಿಸುವುದೆಂಬ ಭರವಸೆ ಇದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕಾರ್ಯದರ್ಶಿ ಗುರುರಾಜ್ ಗಂಟಿಹೊಳೆ, ಕುಂದಾಪುರ ಕ್ಷೇತ್ರ ಅಧ್ಯಕ್ಷ ರಾಜೇಶ್ ಕಾವೇರಿ, ಜಿ.ಪಂ ಸದಸ್ಯರಾದ ಬಾಬು ಶೆಟ್ಟಿ, ಮಮತಾ ಶೆಟ್ಟಿ, ಇಂದಿರಾ ಶೆಟ್ಟಿ, ಯುವ ಮೋರ್ಚಾದ ರಾಘವೇಂದ್ರ ನೆಂಪು, ರೈತ ಮೋರ್ಚಾದ ಗೋಪಾಲಕೃಷ್ಣ ಕಲ್ಮಕ್ಕಿ, ಹಿಂದೂಳಿದ ಮೋರ್ಚಾದ ಆನಂದ ಖಾರ್ವಿ, ಬಿ.ಎಸ್. ಸುರೇಶ್, ಶಾರದಾ ಬಿಜೂರು ಮೊದಲಾದವರು ಉಪಸ್ಥಿತರಿದ್ದರು. ಬಿಜೆಪಿ ಬೈಂದೂರು ಕ್ಷೇತ್ರಾಧ್ಯಕ್ಷ ಸುಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ ಧನ್ಯಾವಾದಗೈದರು. ಸದಾನಂದ ಉಪ್ಪಿನಕುದ್ರು ನಿರೂಪಿಸಿದರು.