ಬೈಂದೂರು: ಈ ಭಾರಿಯ ಜಿಪಂ, ತಾಪಂ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಾ ಸೀಟುಗಳನ್ನು ಗೆದ್ದು ಮತ್ತೆ ಪಂಚಾಯತ್ ಅಧಿಕಾರವನ್ನು ತನ್ನ ತೆಕ್ಕೆಗೆ ತಂದುಕೊಳ್ಳಲಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ತೊಂಡೆಮಕ್ಕಿಯಲ್ಲಿ ಜರುಗಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬೈಂದೂರು ಭಾಗದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಗಲಿರುಳೆನ್ನದೆ ಶ್ರಮಿಸಿದ್ದೇನೆ. ಬೈಂದೂರು ಭಾಗದಲ್ಲಿ ಹಿಂದೆಂದೂ ಆಗದ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಈ ಭಾಗದಲ್ಲಿ ಕಾಂಗ್ರೆಸ್ ಜನರಿಗಾಗಿ ಮಾಡಿದ ಕೆಲಸವನ್ನು ನೆನಪಿನಲ್ಲಿಟ್ಟುಕೊಂಡು ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದರು.
ಹಾಲಿ ತಾಪಂ ಸದಸ್ಯ ರಾಜು ಪೂಜಾರಿ ಮಾತನಾಡಿ ರಾಜ್ಯದಲ್ಲಿ ಸಿದ್ದರಾಮಯ್ಯನವರು ಮುಖ್ಯಂತ್ರಿಯಾದ ಬಳಿಕ ಬೈಂದೂರು ಭಾಗದಲ್ಲಿ ಗೋಪಾಲ ಪೂಜಾರಿ ಅವರ ನೇತೃತ್ವದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಾಗಿವೆ. ಕಾಂಗ್ರೆಸ್ ಸರಕಾರ ಬಡವರಿಗೆ ಬಿಪಿಎಲ್ ಕಾರ್ಡ್, ರೈತರ ಸಾಲಮನ್ನ, ಉದ್ಯೋಗ ಖಾತ್ರಿ, ಆಶ್ರಯ ಮನೆ, ಆಶ್ರಯ ಜಾಗ, ಮಕ್ಕಳಿಗೆ, ಬಟ್ಟೆ, ಊಟ, ಪುಸ್ತಕ, ಹಾಲು ಹೀಗೆ ಹತ್ತಾರು ಯೋಜನೆಗಳನ್ನು ತಂದು ಜನಪರ ಕಾರ್ಯ ಮಾಡುತ್ತಲೇ ಬಂದಿದೆ ಎಂದರು.
ಬೈಂದೂರು ತಾಪಂ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ವನಜಾ ಭಾಸ್ಕರ್ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು. ಬೈಂದೂರು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಗೋಕುಲ್ ಶೆಟ್ಟಿ ಅವರನ್ನು ನೇಮಿಸಿ ಪತ್ರ ನೀಡಲಾಯಿತು. ೨೦ಕ್ಕೂ ಹೆಚ್ಚು ಮಂದಿ ವಿವಿಧ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ತಾಪಂ ಸದಸ್ಯ ರಾಜು ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಗಾಣಿಗ, ಕಾಂಗ್ರೆಸ್ ಮುಖಂಡ ರಘುರಾಮ ಶೆಟ್ಟಿ, ಬೈಂದೂರು ಗ್ರಾಪಂ ಉಪಾಧ್ಯಕ್ಷೆ ಸುಶೀಲಾ ದೇವಾಡಿಗ, ಯಡ್ತರೆ ಗ್ರಾಪಂ ಉಪಾಧ್ಯಕ್ಷೆ ಕಲಾವತಿ ನಾಗರಾಜ್, ಕೊಲ್ಲೂರು ಗ್ರಾಪಂ ಅಧ್ಯಕ್ಷ ವಿಶ್ವನಾಥ ಅಡಿಗ, ಬೈಂದೂರು ಗ್ರಾಮೀಣ ಕಾಂಗ್ರೆಸ್ ಸತೀಶ್ ಕೆವಿ, ತಾಪಂ ಅಭ್ಯರ್ಥಿ ವನಜಾ ಭಾಸ್ಕರ್, ಬೈಂದೂರು ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಗೋಕುಲ್ ಶೆಟ್ಟಿ ಉಪಸ್ಥಿತರಿದ್ದರು. ಬೈಂದೂರು ಗ್ರಾಪಂ ಅಧ್ಯಕ್ಷ ಜನಾರ್ಧನ್ ಸ್ವಾಗತಿಸಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ನಾಗರಾಜ ಗಾಣಿಗ ವಂದಿಸಿದರು.