ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಜನರು ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡುತ್ತಿದ್ದಾರೆ. ಎಲ್ಲಾ ಧರ್ಮಗಳ ಜನರು ಸೌಹಾರ್ದದಿಂದ ಶಾಂತಿಯುತವಾಗಿ ಜೀವನ ನಡೆಸಲು ಇಲಾಖೆ ಸರ್ವ ರೀತಿಯ ಸಹಕಾರ ನೀಡಲಿದೆ. ಜನರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಂಡು ಉತ್ತಮ ವಾತಾವರಣ ನಿರ್ಮಿಸಲು ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಲು ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಕುಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ ಹೇಳಿದರು.
ಅವರು ಗಂಗೊಳ್ಳಿಯ ಪೊಲೀಸ್ ಹೊರಠಾಣೆಯಲ್ಲಿ ಜರಗಿದ ಗಂಗೊಳ್ಳಿ ಗ್ರಾಮದ ಪೊಲೀಸ್ ಜನಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಬ್ಯಾನರ್ ಬಂಟಿಂಗ್ಸ್ ಕಟ್ಟುವ ಸಂದರ್ಭ ಅವಘಡ ಸಂಭವಿಸಿರುವುದರಿಂದ ಸಭೆ ಸಮಾರಂಭಗಳ ಬ್ಯಾನರ್‌ಗಳನ್ನು ಸಂಜೆ ಸೂರ್ಯಾಸ್ತದೊಳಗೆ ಕಟ್ಟಬೇಕು. ಫೆ.೧ರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಇಲ್ಲದಿದ್ದಲ್ಲಿ ದಂಡ ವಿಧಿಸಲಾಗುವುದು. ಮುಂಬರುವ ತಾಪಂ. ಜಿಪಂ ಚುನಾವಣೆ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಇಲಾಖೆ ಕ್ರಮಕೈಗೊಂಡಿದ್ದು, ಬಿಗು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು ಎಂದರು.
ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸುದರ್ಶನ ಎಂ. ಮತ್ತು ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಬ್ಬಣ್ಣ ಮಾಹಿತಿ ನೀಡಿ ಮಾತನಾಡಿದರು. ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ತಾಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಗ್ರಾಪಂ ಸದಸ್ಯ ಯೂನಿಸ್ ಸಾಹೇಬ್, ಗ್ರಾಪಂ ಮಾಜಿ ಸದಸ್ಯ ದುರ್ಗರಾಜ್ ಪೂಜಾರಿ, ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎಸ್.ಚಿಕ್ಕಯ್ಯ ಪೂಜಾರಿ, ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಘಟಕದ ರತ್ನಾಕರ ಗಾಣಿಗ, ಲೋಕೇಶ ಖಾರ್ವಿ, ಗೋಪಾಲ ಚಂದನ್, ಸ್ಥಳೀಯ ರಿಕ್ಷಾ ಚಾಲಕರು, ಗ್ರಾಮಸ್ಥರು ಮೊದಲಾದವರು ಉಪಸ್ಥಿತರಿದ್ದರು.