ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ.
ಕುಂದಾಪುರ: ತಾಲೂಕಿನಲ್ಲಿ ಮರಳುಗಾರಿಕೆ ಪರವಾನಿಗೆ ರದ್ದಾಗಿ ಅರ್ಧ ತಿಂಗಳೇ ಕಳೆಯುತ್ತಾ ಬಂದಿದೆ. ಆದರೆ ಯಾವುದೇ ವಿಘ್ನವಿಲ್ಲದೇ ಮರಳುಗಾರಿಕೆ ಅಕ್ರಮವಾಗಿ ನಡೆಯುತ್ತಿದೆ! ಜನವರಿ 22ರಿಂದ ಮರಳುಗಾರಿಕೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂಬ ಜಿಲ್ಲಾಡಳಿತದ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ.
ಇಷ್ಟರಲ್ಲಿಯೇ ತಿಳಿಯುತ್ತಿದೆ ಪರವಾನಿಗೆ ರದ್ದಾದ ಮೇಲೂ ಎಗ್ಗಿಲ್ಲದೇ ಮರಳು ಲೂಟಿ ನಡೆಸುತ್ತಿರುವುದರ ಹಿಂದಿನ ಲಾಭಿ. ತೀರಾ ಹಾಸ್ಯಾಸ್ಪದವೆಂದರೆ ತಾಲೂಕಿನ ಹದಿನೈದಕ್ಕೂ ಹೆಚ್ಚು ಕಡೆಗಳಲ್ಲಿ ಮರಳುಗಾರಿಕೆ ನಡೆಯುತ್ತಿದ್ದರೂ ಗಣಿಗಾರಿಕೆ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಒಂದು ಕಡೆ ಮಾತ್ರವೇ ರೈಡ್ ಮಾಡಿ ದಾಖಲೆ ನೀಡುತ್ತಿದ್ದಾರೆ. ಉಳಿದ ಕಡೆ ಕ್ರಮವೇನು ಎಂದು ಪ್ರಶ್ನಿಸಿದರೆ ಇದು ನಮಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂಬ ಬೇಜವಾಬ್ದಾರಿಯ ಉತ್ತರ ನೀಡುತ್ತಿದ್ದಾರೆ. ಇದು ಕುಂದಾಪ್ರ ಡಾಟ್ ಕಾಂ ವರದಿ
[quote font_size=”15″ bgcolor=”#ffffff” bcolor=”#44b200″ arrow=”yes” align=”right”]* ಅಕ್ರಮ ಮರಳುಗಾರಿಕೆ ಜಿಲ್ಲಾಡಳಿತದ ನಿಷ್ಕ್ರಿಯತೆಗೆ ಹಿಡಿದ ಕನ್ನಡಿಯಾಗಿದೆ. ಜಿಲ್ಲಾದ್ಯಂತ ನಡೆಯುತ್ತಿರುವ ಮರಳುಗಾಕೆಯ ಬಗ್ಗೆ ಬಿಜೆಪಿ ಎಷ್ಟು ಭಾರಿ ಎಚ್ಚರಿಸಿದ್ದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ತಾಳಕ್ಕೆ ತಕ್ಕಂತೆ ಅಧಿಕಾರಿಗಳು ಹೆಜ್ಜೆ ಹಾಕುತ್ತಿರುವುದರಿಂದ ಮರಳುಗಾರಿಕೆ ಅಭಾದಿತವಾಗಿ ನಡೆಯುತ್ತಿದೆ.
– ರಾಜೇಶ್ ಕಾವೇರಿ, ಪುರಸಭಾ ಸದಸ್ಯ, ಕುಂದಾಪುರ.[/quote]
ಅಂದ ಹಾಗೆ ಈ ಅಕ್ರಮ ಮರಳುಗಾರಿಕೆ ಯಾರಿಗೂ ತಿಳಿಯದಂತೆ ನಡೆಯುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಮಗ್ಗಲು, ಜನ ನಿಬಿಡ ಪ್ರದೇಶದಲ್ಲೇ ರಾಜಾರೋಷವಾಗಿ ನಡೆಯುತ್ತಿದೆ. ಬಳ್ಕೂರು, ಕಂಡ್ಲೂರು ಪೇಟೆ ಪಕ್ಕದ ವರಾಹಿ ನದಿ, ಹಟ್ಟಿಕುದ್ರು, ಸೀತಾನದಿ, ಬಸ್ರೂರು ಪೇಟೆ ಪಕ್ಕ, ಪಡುಕೋಣೆ, ಮರವಂತೆ, ಅರಾಟೆ, ಬಂಟ್ವಾಡಿ, ತಲ್ಲೂರು, ಹಟ್ಟಿಯಂಗಡಿ, ಹಾಗೂ ನಾಡ ಗುಡ್ಡೆಯಂಗಡಿ ಮುಂತಾದ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿದೆ. ಇಷ್ಟಾದರೂ ಸಹ ಜಿಲ್ಲಾಡಳಿತ ಮತ್ತು ಜವಾಬ್ದಾರಿ ಹೊತ್ತ ಇಲಾಖೆಗಳು ಕಣ್ಣುಮುಚ್ಚಿ ಕುಳಿತ ಹಿಂದಿನ ಮರ್ಮ ಮಾತ್ರ ತಿಳಿಯುತ್ತಿಲ್ಲ. ಅಕ್ರಮ ಮರಳುಗಾರಿಕೆಯನ್ನು ನಿಯಂತ್ರಿಸುವಲ್ಲಿ ಸಂಬಂಧಿತ ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದು ಜನಸಾಮಾನ್ಯರು ಆಗ್ರಹಿಸಿದ್ದಾರೆ. ಇದು ಕುಂದಾಪ್ರ ಡಾಟ್ ಕಾಂ ವರದಿ