ಬೈಂದೂರು: ಗ್ರಾಮದ ಶೈಕ್ಷಣಿಕ ಸ್ಥಿತಿಗತಿ ಹಾಗೂ ಧಾರ್ಮಿಕ ಕ್ಷೇತ್ರದ ಅಭಿವೃದ್ದಿಗಳು ಊರಿನ ಪ್ರಗತಿಯನ್ನು ಬಿಂಬಿಸುತ್ತದೆ ಎಂದು ಪತ್ರಕರ್ತ ಅರುಣ್ ಕುಮಾರ್ ಶಿರೂರು ಅಭಿಪ್ರಾಯಪಟ್ಟರು.
ಖಂಬದಕೋಣೆ ಹೊನ್ನೆಕಳಿ ಜಟ್ಟಿಗೇಶ್ವರ ದೈವಸ್ಥಾನದ ಹಾಲುಹಬ್ಬ, ಗೆಂಡಸೇವೆ, ಮಂಡಲಸೇವೆ ಹಾಗೂ ಸ್ಥಳೀಯ ಕದಂಬ ಯುವಕ ಮಂಡಲದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಕ್ರೀಯಾತ್ಮಕ ಚಟುವಟಿಕೆಗಳಿಂದ ಸಂಘಟನೆಯ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ. ಪ್ರಗತಿಯ ಹಿಂದೆ ನಾವು ಎತ್ತ ಸಾಗುತ್ತಿದ್ದೇವೆ ಎಂಬುವುದನ್ನು ಯೋಚಿಸಬೇಕಾಗಿದೆ. ಕಾಲದ ಗೋಜಿನಲ್ಲಿ ಮಾನವೀಯ ಹಾಗೂ ಭಾವನಾತ್ಮಕ ಸಂಬಂಧಗಳ ಕೊರತೆಯ ನಡುವೆ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಕೌಟುಂಬಿಕ ವ್ಯವಸ್ಥೆಗಳ ಅರಿವು ಮೂಡಿಸುವ ಅನಿವಾರ್ಯತೆಯಿದೆ ಎಂದರು.
ಯುವಕ ಮಂಡಲದ ಗೌರವಾಧ್ಯಕ್ಷ ಸಂತೋಷ್ ಪೂಜಾರಿ ಅಧ್ಯಕ್ಷತೆವಹಿಸಿದ್ದರು. ಉದ್ಯಮಿ ಶಶಿಧರ ಶೆಣೈ, ಶಿಕ್ಷಕಿ ಕೃಷ್ಣಾಬಾಯಿ ಟೀಚರ್, ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಲತಾ, ರಾಷ್ಟ್ರೀಯ ಯೋಗ ಹಾಗೂ ಕ್ರೀಡಾ ಪ್ರತಿಭೆಗಳಾದ ದಿವ್ಯಾ ಮತ್ತು ಅಕ್ಷತಾ ಇವರನ್ನು ಸನ್ಮಾನಿಸಲಾಯಿತು. ದೈವಸ್ಥಾನ ಅಭಿವೃದ್ದಿಗೆ, ಧಾರ್ಮಿಕ ಕಾರ್ಯಗಳಿಗೆ ಸಹಕರಿಸಿದ ದಾನಿಗಳನ್ನು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಸಂದರ್ಭ ಗೌರವಿಸಲಾಯಿತು. ಲಕ್ಕಿಡಿಪ್ ಯೋಜನೆಯಲ್ಲಿ ಸ್ಥಳದಲ್ಲಿ ಡ್ರಾ ನಡೆಸಿ ಅದೃಷ್ಟದಾಟದಲ್ಲಿ ಗೆದ್ದವರಿಗೆ ಬಹುಮಾನ ನೀಡಲಾಯಿತು.
ದೈವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಕೃಷ್ಣ ದೇವಾಡಿಗ ಹೊಳೆಬಾಗಿಲು, ಯುವಕ ಮಂಡಲದ ಅಧ್ಯಕ್ಷ ಹರೀಶ್ ಪೂಜಾರಿ ಉಪಸ್ಥಿತರಿದ್ದರು. ಗೌರವ ಸಲಹೆಗಾರ ಕುಮಾರ್ ದೇವಾಡಿಗ ಪ್ರಾಸ್ತಾವಿಸಿದರು. ಯೋಗೇಶ್ ಮಟ್ನಮನೆ ಸ್ವಾಗತಿಸಿ, ವಂದಿಸಿದರು. ಶಿವರಾಮ ನಿರೂಪಿಸಿದರು. ನಂತರ ಸಾಸ್ತಾನದ ವೀ-ಫ್ರೆಂಡ್ಸ್ ತಂಡದ ಕಲಾವಿದರಿಂದ ’ಯಾರೂ ಸಮಯಿಲ್ಲ’ ನಾಟಕ ಪ್ರದರ್ಶನಗೊಂಡಿತು.