ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚ್‌ನ ವಾರ್ಷಿಕ ಉತ್ಸವ ತೆರಾಲಿಗೆ ಪೂರ್ವಭಾವಿಯಾಗಿ ನಡೆಯುವ ಕೋಂಪ್ರಿ ಪೆಸ್ತ್ ಸಡಗರದಿಂದ ಆಚರಿಸಲಾಯಿತು.
ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಮಾತನಾಡಿದ ಗಂಗೊಳ್ಳಿ ಚರ್ಚ್‌ನ ಧರ್ಮಗುರು ರೆ. ಫಾ. ಆಲ್ಬರ್ಟ್ ಕ್ರಾಸ್ತಾ, ಎಲ್ಲವರನ್ನು ನಮ್ಮವರೆಂದು ತಿಳಿದು ದೀನ-ದಲಿತರ, ಬಡವರ, ರೋಗಿಗಳ, ಖೈದಿಗಳ ಹಾಗೂ ನಮ್ಮ ನೆರೆಹೊರೆಯವರ ಸುಖ-ಕಷ್ಟಗಳಗೆ ಸ್ಪಂದಿಸುವ ಮೂಲಕ ಮಾನವೀಯತೆ ತೋರಬೇಕು. ಮಾನವೀಯ ಧರ್ಮದ ಮೂಲಕ ಸಾಮರಸ್ಯ ಕಾಪಾಡಿಕೊಂಡು ಪರಸ್ಪರ ಪ್ರೀತಿಯಿಂದ ಬದುಕುವುದೇ ನಿಜವಾದ ಜೀವನ ಎಂದರು.
ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳು ಚರ್ಚ್‌ನಿಂದ ಹೊರಟು ಯಡ್ತರೆವರೆಗೆ ಸಾಗಿದ ಪುರಮೆರವಣಿಗೆಯಲ್ಲಿ ಪರಮಪ್ರಸಾದವನ್ನು ಸ್ಥಬ್ದಚಿತ್ರ ವಾದ್ಯಘೋಷಗಳೊಂದಿಗೆ ಕೊಂಡೊಯ್ದರು. ಲಿಯೋ ನಜ್ರತ್ ಮತ್ತು ತಂಡದವರ ಗಾಯನ ಕಾರ್ಯಕ್ರಮ ಮೆರವಣಿಗೆಗೆ ಮೆರುಗು ನೀಡಿತ್ತು. ಬೈಂದೂರು ಚರ್ಚ್ ಧರ್ಮಗುರು ರೆ. ಫಾ. ರೊನಾಲ್ಡ್ ಮಿರಾಂದ, ಕಾರ್ಯದರ್ಶಿ ಸಿಸಿಲಿಯಾ ರೆಬೆರೊ, ಉಪಾಧ್ಯಕ್ಷ ರಾಬಟ್ ರೆಬೆಲ್ಲೊ ಉತ್ಸವದ ನೇತೃತ್ವವಹಿಸಿದ್ದರು.