ಬೈಂದೂರು: ಅಸಮರ್ಥ ಸಚಿವರ ತಂಡ ಕಟ್ಟಿಕೊಂಡು ರಾಜ್ಯಭಾರ ಮಾಡುತ್ತಿರುವ ಮುಖ್ಯಮಂತ್ರಿ. ಭ್ರಷ್ಟಾಚಾರದಿಂದ ತಾಂಡವವಾಡುತ್ತಿರುವ ರಾಜ್ಯ. ಸರಕಾರದಿಂದ ಮಂಜೂರಾದ ಅಭಿವೃದ್ಧಿ ಕಾರ್ಯಗಳು ಅನುಷ್ಟಾನಗೊಳ್ಳದೇ ಸ್ಥಗಿತಗೊಂಡಿದ್ದು, ರಾಜ್ಯದ ತುಘಲಕ್ ಸರಕಾರಕ್ಕೆ ಬುದ್ದಿ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಗೋಳಿಹೊಳೆಯಲ್ಲಿ ಸಂಜೆ ನಡೆದ ಬೈಂದೂರು ಜಿಪಂ, ತಾಪಂ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಅಧಿಕಾರದ ಮದವೇರಿದ ಮುಖ್ಯಮಂತ್ರಿ ಎಲ್ಲದಕ್ಕೂ ಕೇಂದ್ರದ ಕಡೆ ಕೈತೋರಿಸುತ್ತಿದ್ದಾರೆ. ಜನವಿರೋಧಿ ನೀತಿ ಅನುಸರಿಸಿ ಸಾಮಾನ್ಯ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಸರಕಾರಕ್ಕೆ ಅನ್ನದಾತರ ಸರಣಿ ಆತ್ಮಹತ್ಯೆಗಳು ನಡೆಯುತ್ತಿದ್ದರೂ ಮುಖ್ಯಮಂತ್ರಿಗಳು ಪರಿಹಾರ ನೀಡಲಿಕ್ಕೂ ಸಬೂಬು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಈ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಅನ್ಯಾಯ, ಅಧರ್ಮ, ಅತ್ಯಾಚಾರ, ಭೃಷ್ಟಾಚಾರ ಹೆಚ್ಚಾಗಿದ್ದು ಕಾನೂನು ಸುವ್ಯವಸ್ಥೆ ಸರ್ವನಾಶವಾಗಿದೆ. ದೇಶದ ಭದ್ರತೆ ಕಾಂಗ್ರೆಸ್‌ಗೆ ಸಂಬಂಧಿಸಿಲ್ಲ ಎಂಬಂತೆ ರಾಜ್ಯ ಸರಕಾರ ವರ್ತಿಸುತ್ತಿದೆ ಎಂದು ಸರಕಾರದ ವಿರುದ್ದ ಹರಿಹಾಯ್ದರು.
ಹಿಂದೆ ಬಿಜೆಪಿ ಸರಕಾರ ಮಾಡಿದ ಹತ್ತು-ಹಲವು ಯೋಜನೆಗಳ ಅನುಷ್ಟಾನಗಳ ಪ್ರಮಾಣ ನಿಧಾನಗತಿಯಲ್ಲಿ ಸಾಗುತ್ತಿದೆ. ಮುಖ್ಯಮಂತ್ರಿಗಳೇ ಸ್ವತಃ ಹಣಕಾಸು ಇಲಾಖೆಯನ್ನು ನೋಡಿಕೊಳ್ಳುತ್ತಿದ್ದರೂ ಕೇಂದ್ರದಿಂದ ಬಂದ ಅನುದಾನ, ಅಭಿವೃದ್ದಿ ಯೋಜನೆಗಳಿಗಾಗಿ ವ್ಯಯಿಸಿದ ಹಣದ ಲೆಕ್ಕಾಚಾರದ ಬಗ್ಗೆ ಅವರಿಗೆ ಮಾಹಿತಿಯಿಲ್ಲ. ಬಜೆಟ್‌ನಲ್ಲಿ ಮೀಸಲಿರಿಸಿದ ಹಣ ಖರ್ಚುಮಾಡದೇ ಜನರಿಗೆ ವಂಚಿಸುತ್ತಿದ್ದು, ಸದಾ ನಿದ್ದೆಯಲ್ಲಿರುವ ಸರಕಾರ ಅತ್ಯಂತ ದಯನೀಯಸ್ಥಿತಿಗೆ ಬಂದು ನಿಂತಿದೆ ಎಂದು ಬಿಎಸ್‌ವೈ ಕುಟುಕಿದರು. ಮುಂದಿನ ಎರಡು ವರ್ಷ ರಾಜ್ಯದ ಮೂಲೆಮೂಲೆಯಲ್ಲಿ ಸಂಚರಿಸಿ ಪಕ್ಷದ ಬಲವರ್ಧನೆಗಾಗಿ ಶ್ರಮಿಸುತ್ತೇನೆ. ಈಗಿನ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆದು ಬಿಜೆಪಿಯನ್ನು ಅಧಿಕಾರಕ್ಕೇರಿಸುವ ತನಕ ವಿರಮಿಸಲಾರೆ ಎಂದರು.
ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಜಿಪಂ ಮಾಜಿ ಸದಸ್ಯೆ ಸುಪ್ರೀತಾ ದೀಪಕ್‌ಕುಮಾರ್ ಶೆಟ್ಟಿ, ಸುನಿಲ್ ಭಟ್ಕಳ ನೇತೃತ್ವದ ತಂಡ, ಮೆಟ್ಟಿನಹೊಳೆ ಗ್ರಾಮಸ್ಥರನ್ನು ಬಿಎಸ್‌ವೈ ಪಕ್ಷಕ್ಕೆ ಬರಮಾಡಿಕೊಂಡರು.
ವೇದಿಕೆಗೆ ಬಂದವರೇ ಅಸೀನರಾಗುವ ಮೊದಲು ಮೈಕ್ ಹಿಡಿದ ಯಡಿಯೂರಪ್ಪ ಸಿಯಾಚಿನ್‌ನಲ್ಲಿ ಆರು ದಿನ ಹಿಮದಡಿ ಸಿಲುಕಿ ಸಾವನ್ನು ಗೆದ್ದುಬಂದರೂ ನಂತರ ಚಿಕಿತ್ಸೆ ಫಲಕಾರಿಯಾಗದೇ ಹುತಾತ್ಮರಾದ ವೀರಕನ್ನಡಿಗ ಯೋಧ ಲಾನ್ಸ್‌ನಾಯಕ್ ಹನುಮಂತಪ್ಪ ಕೊಪ್ಪದ ಅವರ ಆತ್ಮಕ್ಕೆ ಶಾಂತಿಕೋರಿ ಪ್ರಾರ್ಥಿಸುವಂತೆ ಜನರಲ್ಲಿ ಮನವಿ ಮಾಡಿದರು. ಸಭೆಯಲ್ಲಿ ನೆರೆದಿದ್ದ ಸಹಸ್ರಾರು ಜನರು ಸಾಮೂಹಿಕ ಮೌನಪ್ರಾರ್ಥನೆ ಮೂಲಕ ಯೋಧನಿಗೆ ಶೃದ್ದಾಂಜಲಿ ಸಲ್ಲಿಸಿದರು.
ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ.ಲಕ್ಷ್ಮೀನಾರಾಯಣ, ಗೋಳಿಹೊಳೆ ಗ್ರಾಪಂ ಅಧ್ಯಕ್ಷ ರಾಜು ಪೂಜಾರಿ, ರಾಜ್ಯ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಗುರುರಾಜ ಗಂಟಿಹೊಳೆ, ಬೈಂದೂರು ಜಿಪಂ ಅಭ್ಯರ್ಥಿ ಶಂಕರ ಪೂಜಾರಿ, ಶಿರೂರು ಜಿಪಂ ಅಭ್ಯರ್ಥಿ ಸುರೇಶ ಬಟವಾಡಿ, ತಾಪಂ ಅಭ್ಯರ್ಥಿಗಳಾದ ಬಿ.ಎಸ್.ಸುರೇಶ ಶೆಟ್ಟಿ, ಮಾಲಿನಿ ಕೆ., ವಿದ್ಯಾವತಿ ಕನ್ನಂತ, ಸುಜಾತ ದೇವಾಡಿಗ, ಶಕ್ತಿಕೇಂದ್ರದ ಎಂ.ಆರ್.ಶೆಟ್ಟಿ, ವೆಂಕಟ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಪಡುವರಿ ಗ್ರಾಪಂ ಉಪಾಧ್ಯಕ್ಷ ಸದಾಶಿವ ಡಿ ನಿರೂಪಿಸಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ವಂದಿಸಿದರು.