ಕುಂದಾಪುರ: ರಜತದಾನದಿಂದ ಪಿತೃದೋಷ ಪರಿಹಾರ ಎಂಬುದು ಶಾಸ್ತ್ರ ವಿಧಿತ. ಮಾನವ ಜೀವನದಲ್ಲಿ ಬಿಳಿಲೋಹ ಬೆಳ್ಳಿಗೆ ಪ್ರಮುಖ ಸ್ಥಾನವಿದೆ ಈಶ್ವರ ತ್ರಿಪುರಾಸುರನನ್ನು ಸಂಹರಿಸಿದಾಗ ಈಶ್ವರನ ಮೂರನೇ ಕಣ್ಣಿನಲ್ಲಿ ಸುರಿದ ಆನಂದ ಬಾಷ್ಪವೇ ಬೆಳ್ಳಿಯಾಯಿತು ಎಂದು ಪುರಾಣದಲ್ಲಿ ಉಲ್ಲೇಖಿತವಾಗಿದೆ. ಮಾನವನ ಮಾನಸಿಕ ಆರೋಗ್ಯಕ್ಕೆ ಬೆಳ್ಳಿ ಅಗತ್ಯ, ಇಂತಹ ಶ್ರೇಷ್ಟ ಲೋಹವನ್ನು ದಾನ ಮಾಡುವುದರಿಂದ ಪಿತೃಋಣ ಮತ್ತಿತರ ಪಾಪಗಳು ಪರಿಹಾರವಾಗುತ್ತವೆ ಎಂದು ಧಾರ್ಮಿಕ ಪರಿಷತ್‌ನ ಮಾಜಿ ಸದಸ್ಯ ವೇದಮೂರ್ತಿ ಪಂಜ ಭಾಸ್ಕರ್ ಭಟ್ ಹೇಳಿದರು.
ಪ್ರಸಿದ್ದ ಪುಣ್ಯಕ್ಷೇತ್ರ ಗುಡ್ಡಟ್ಟು ವಿನಾಯಕ ದೇವಳದ ಗರ್ಭಗುಡಿಯ ಮುಖದ್ವಾರಕ್ಕೆ ದಾನಿಗಳ ನೆರವಿನಿಂದ ಸುಮಾರು 12ಲಕ್ಷ ರೂ. ವೆಚ್ಚದಲ್ಲಿ ಆಚ್ಚಾಧಿಸಿದ ರಜತ ದ್ವಾರವನ್ನು ಶುಕ್ರವಾರ ಸಂಕಷ್ಟಹರ ಚತುರ್ಥಿಯಂದು ಶ್ರೀ ದೇವರಿಗೆ ಸಮರ್ಪ್ಪಿಸಿ ಅವರು ಮಾತನಾಡಿದರು.
ಪ್ರಶಾಂತ ಪರಿಸರದಲ್ಲಿ ಗುಹಾಂತರ್ಗತವಾಗಿರುವ ಗುಡ್ಡಟ್ಟು ಕ್ಷೇತ್ರವನ್ನು ವರ್ಣಿಸಿದ ಅವರು, ವಿನಾಯಕನ ಅನುಗ್ರಹದಿಂದ ಮತ್ತು ದಾನಿಗಳ ನೆರವಿನಿಂದ ದೇವಾಲಯದ ಇತರ ಎಲ್ಲಾ ಸ್ಥಂಭಗಳೂ ಶೀಘ್ರ ರಜತ ಆಚ್ಚಾದನೆಗೊಳ್ಳಲಿ ಎಂದು ಹಾರೈಸಿದರು.
ಶ್ರೀ ದೇವರ ಶಿಲಾಯಮಯ ಗರ್ಭಗುಡಿಯ ಸಮರ್ಪಣಾ ವರ್ಧಂತಿ ಪ್ರಯುಕ್ತ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಸನ್ನಿದಿಯಲ್ಲಿ ಬೆಳಿಗ್ಗೆ ಸಾವಿರದ ನೂರಹನ್ನೊಂದು ಕಾಯಿ ಗಣಹೋಮ, ರುದ್ರಹೋಮ, ದುರ್ಗಾಹೋಮ, ಅಥರ್ವಶೀರ್ಷ ಆವರ್ತನ ಕಲಶ, ಆಯರ್ ಕೊಡ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮಧ್ಯಾಹ್ನ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ ಭೋಜನ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಅನುವಂಶಿಕ ಆಡಳಿತ ಧರ್ಮದರ್ಶಿ ಜಿ. ಅನಂತಪದ್ಮನಾಭ ಅಡಿಗ, ಅರ್ಚಕ ರಾಘವೇಂದ್ರ ಅಡಿಗ, ಸೂರ್ಯನಾರಾಯಣ ಅಡಿಗ, ಪುರೋಹಿತ ಮಹಾಬಲೇಶ್ವರ ಐತಾಳ, ದಾನಿಗಳು ಉಪಸ್ಥಿತರಿದ್ದರು.
ರಾತ್ರಿ ಸಂಕಷ್ಟಹರ ಚತುರ್ಥಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗುಡ್ಡಟ್ಟು ಜಿ.ಪಂ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು. ನಂತರ ಕೊಳ್ಕೆಬೈಲು ಶಿರಿಯಾರ ಬ್ರಹ್ಮಬಂಟ ಶಿವರಾಯ ಯಕ್ಷಗಾನ ಕಲಾಸಂಘದವರಿಂದ ಯಕ್ಷಗಾನ ಕಲಾ ಪ್ರದರ್ಶನ ನಡೆಯಿತು