ಗಂಗೊಳ್ಳಿ: ಮಕ್ಕಳಿಗೆ ನಮ್ಮ ಆಚಾರ, ವಿಚಾರ, ಪರಂಪರೆಗಳನ್ನು ತಿಳಿ ಹೇಳುತ್ತಾ ಅವರಲ್ಲಿ ಶಿಸ್ತು ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ಅವರನ್ನು ಸಮಾಜದ ಸತ್ಪ್ರಜೆಗಳನ್ನಾಗಿ ರೂಪಿಸುವ ಮಹತ್ತರವಾದ ಜವಾಬ್ದಾರಿ ಪಾಲಕರ ಮೇಲಿದೆ. ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿ ಬೆಳೆಸಲು ಯುವ ಜನಾಂಗಕ್ಕೆ ಮಾರ್ಗದರ್ಶನ ಮಾಡಬೇಕಿದೆ. ಮಕ್ಕಳನ್ನು ಪ್ರೀತಿ ವಿಶ್ವಾಸದಿಂದ ಬೆಳೆಸಿ ಅವರಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಬೇಕು ಎಂದು ಗಂಗೊಳ್ಳಿಯ ಉದ್ಯಮಿ ಎಂ.ಎಂ.ಸುವರ್ಣ ಹೇಳಿದರು.
ಅವರು ಗಂಗೊಳ್ಳಿಯ ಶ್ರೀ ವಿಜಯ ವಿಠಲ ಮಂಟಪದಲ್ಲಿ ಜರಗಿದ ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ 29ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೇವಾ ಸಂಗಮದ ಶಿಶು ಮಂದಿರಗಳು ಮಕ್ಕಳಿಗೆ ಬಾಲ್ಯದಲ್ಲಿ ಅಗತ್ಯವಿರುವ ನಮ್ಮ ಹಿಂದು ಪರಂಪರೆಗೆ ಪೂರಕವಾದ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯ. ಗಂಗೊಳ್ಳಿಯಲ್ಲಿ ಕಳೆದ ೨೯ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶಿಶು ಮಂದಿರಗಳು ಮಕ್ಕಳಿಗೆ ಬದುಕಿನ ಆಶಾಕಿರಣವಾಗಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಪಶು ವೈದ್ಯಾಧಿಕಾರಿ ಡಾ.ಶಿವಾನಂದ ರಾವ್ ಹಾಗೂ ಸೇವಾ ಸಂಗಮ ಟ್ರಸ್ಟ್‌ನ ವಿಶ್ವಸ್ಥ ಕೇಶವರಾಯ ಪ್ರಭು ಶುಭಾಶಂಸನೆಗೈದರು. ಸುಮಿತ್ರಾ ಎಸ್.ರಾವ್ ಮಕ್ಕಳಿಗೆ ಬಹುಮಾನ ವಿತರಿಸಿದರು. ಮಾತಾಜಿ ಸುಮನಾ ಉಪಸ್ಥಿತರಿದ್ದರು. ಶಿಶು ಮಂದಿರದ ಅಧ್ಯಕ್ಷ ಶ್ರೀನಿವಾಸ ಎಂ. ಸ್ವಾಗತಿಸಿದರು. ಶಿಶು ಮಂದಿರದ ಸಂಚಾಲಕ ಡಾ.ಕಾಶೀನಾಥ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾತಾಜಿ ಶೈಲಾ ವರದಿ ವಾಚಿಸಿದರು. ದೇವದಾಸ ಖಾರ್ವಿ ಸಂದೇಶ ವಾಚಿಸಿದರು. ಉಷಾ ಪಿ.ಮಡಿವಾಳ ಮತ್ತು ವಸಂತಿ ಎನ್.ಖಾರ್ವಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ವಿಜಯಶ್ರೀ ವಿ.ಆಚಾರ್ಯ ಮತ್ತು ಅಶ್ವಿತಾ ಜಿ.ಪೈ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಶಿಶು ಮಂದಿರದ ಮಾಜಿ ಅಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸವಿತಾ ಯು.ದೇವಾಡಿಗ ವಂದಿಸಿದರು.