ಗಂಗೊಳ್ಳಿ: ಕುಂದಾಪುರ ತಾಲೂಕಿನ ಗಂಗೊಳ್ಳಿಯ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತದ ಮುಂದಿನ ಐದು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಪ್ರಸಿದ್ದ ಉದ್ಯಮಿ ಎಚ್. ಗಣೇಶ್ ಕಾಮತ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಸಹಕಾರಿಯ ಎಚ್.ಎಲ್.ಕಾಮತ್ ಸಭಾಂಗಣದಲ್ಲಿ ಚುನಾವಣಾಧಿಕಾರಿ ಸುನೀಲ್ ಕುಮಾರ್ ಸಿ. ಎಂ. ಉಪಸ್ಥಿತಿಯಲ್ಲಿ ನಡೆದ ನೂತನ ಆಡಳಿತ ಮಂಡಳಿಯ ಸಭೆಯಲ್ಲಿ ಇವರನ್ನು ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಪುನರಾಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಔಷಧೋದ್ಯಮಿ ಹಾಗೂ ಸಹಕಾರಿಯ ಹಿರಿಯ ನಿರ್ದೇಶಕರಾದ ಜಿ. ವಿಶ್ವನಾಥ ಆಚಾರ್ಯ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಸಹಕಾರಿಯ ಆಡಳಿತ ಮಂಡಳಿಯ ಚುನಾಯಿತ ನೂತನ ಸದಸ್ಯರಾದ ಜಿ. ವೆಂಕಟೇಶ್ ನಾಯಕ್, ಜಿ. ವೆಂಕಟೇಶ ಶೆಣೈ, ಬಿ. ರಾಘವೇಂದ್ರ ಪೈ, ಜಿ. ಉದಯಶಂಕರ್ ರಾವ್, ವತ್ಸಲಾ ಎಸ್. ಕಾಮತ್, ಮಾಲಾ ಕೆ. ನಾಯಕ್, ನಾರಾಯಣ ಪೂಜಾರಿ, ಮಹಾಬಲ ಪೂಜಾರಿ, ಆನಂದ ಜಿ. ಹಾಗೂ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕ ಗಣೇಶ್ ನಾಯಕ್ ಉಪಸ್ಥಿತರಿದ್ದರು.
ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ, ಗಂಗೊಳ್ಳಿ ಟೈಲ್ ವರ್ಕ್ಸ್‌ನ ಆಡಳಿತ ಪಾಲುದಾರರಾಗಿರುವ ಎಚ್. ಗಣೇಶ್ ಕಾಮತ್ ಅವರು ಕಳೆದ ೧೦ ವರ್ಷಗಳಿಂದ ಸಹಕಾರಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಹಕಾರಿಗೆ ಸ್ವಂತ ನಿವೇಶನ ಹಾಗೂ ಕಟ್ಟಡ ಒದಗಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದು, ಇವರ ಅಧ್ಯಕ್ಷೀಯ ಅವಧಿಯಲ್ಲಿ ಸಹಕಾರಿಗೆ ರಾಜ್ಯ ಪ್ರಶಸ್ತಿ ದೊರಕಿದೆ. ಪ್ರಸ್ತುತ ಸಹಕಾರಿಯು ಜಿಲ್ಲೆಯ ಸೌಹಾರ್ದ ಸಹಕಾರಿಗಳಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಇವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಸ್ಕೂಲ್ ಅಸೊಸಿಯೇಷನ್‌ನ ಸಂಚಾಲಕರಾಗಿ, ರೊಟರಿ ಜಿಲ್ಲೆ 3180ರ ಸಹಾಯಕ ಗವರ್ನರ್ ಆಗಿ ಸೇವೆ ಸಲ್ಲಿಸಿರುತ್ತಾರೆ.