ಕುಂದಾಪುರ: ಕಲಿಕೆಯೊಂದಿಗೆ ವಿದ್ಯಾರ್ಥಿಗಳು ತಮ್ಮ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ವಿಜ್ಞಾನದೆಡೆಗೆ ಆಸಕ್ತಿ ತಳೆಯಬೇಕಾದ ಅಗತ್ಯತೆ ಇದೆ ಎಂದು ತೆಕ್ಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಹೇಶ್ ಹೇಳಿದರು.
ಅವರು ತೆಕ್ಕಟ್ಟೆ ವಿಶ್ವ ವಿನಾಯಕ ಸಿಬಿಎಸ್‌ಇ ಸ್ಕೂಲ್‌ನಲ್ಲಿ ನಡೆದ ವಿಶ್ವ ವಿಜ್ಞಾನ ದಿನಾಚರಣೆಯನ್ನು ಉದ್ಧೇಶಿಸಿ ಮಾತನಾಡಿದರು. ಸತ್ಯವನ್ನು ಹುಡುಕುವುದೇ ವಿಜ್ಞಾನ ಆದರೆ ಸತ್ಯ, ಸುಳ್ಳು, ನಂಬಿಕೆಯ ನಡುವೆ ವಿಜ್ಞಾನವು ಶೇ.೬೦ ರಷ್ಟು ಅಭಿವೃದ್ಧಿಗೊಂಡಿದ್ದು ಇಂದಿನ ಡಿಜಿಟಲ್ ಪ್ರಪಂಚದ ಮೊದಲೇ ನಮ್ಮ ಮೆದುಳಿನಲ್ಲಿ ಜಿಪಿಎಸ್ ತಂತ್ರಾಂಶದ ವ್ಯವಸ್ಥೆ ಹೊಂದಿರುವ ಬಗ್ಗೆ ಆವಿಷ್ಕಾರಗೊಳಿಸಿದ್ದಾರೆ.
ಆದರೆ ಮುಂದುವರಿದ ಆಧುನಿಕತೆಯಲ್ಲಿ ನಮ್ಮಲ್ಲಿರುವ ಶಕ್ತಿಯನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕಾಗಿದೆ.ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪೋಷಕರು ಮಕ್ಕಳು ಕೇಳುವ ಪ್ರಶ್ನೆಯನ್ನು ಸಂರಕ್ಷಣೆ ಮಾಡಿ ಸೂಕ್ತ ಮಾರ್ಗದರ್ಶನ ನೀಡಿದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಜ್ಞಾನ ಬೆಳಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತೆಕ್ಕಟ್ಟೆ ವಿಶ್ವ ವಿನಾಯಕ ಸಿಬಿಎಸ್‌ಇ ಸ್ಕೂಲ್‌ನ ಮೆನೇಜಿಂಗ್ ಟ್ರಸ್ಟಿಗಳಾದ ಎಮ್.ಪ್ರಭಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ತೆಕ್ಕಟ್ಟೆ ವಿಶ್ವ ವಿನಾಯಕ ಸಿಬಿಎಸ್‌ಇ ಸ್ಕೂಲ್ ಅಕಾಡೆಮಿಕ್ ಡೈರೆಕ್ಟರ್ ಡಾ| ಸುರೇಶ್ ಶೆಟ್ಟಿ ಎಕ್ಕಾರ್, ಪ್ರಾಂಶುಪಾಲೆ ನಾಗರತ್ನ ಎನ್.ಪಾಲನ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿಜ್ಞಾನ ಮಾದರಿ ಪ್ರದರ್ಶನ ನಡೆಯಿತು. ವಿದ್ಯಾರ್ಥಿನಿ ಸನಿಹಾ ಸ್ವಾಗತಿಸಿ, ವಿದ್ಯಾರ್ಥಿನಿ ಸ್ಫೂರ್ತಿ ನಿರೂಪಿಸಿ, ವಿದ್ಯಾರ್ಥಿ ಶ್ರೀವತ್ಸ ಬಾಯರಿ ವಂದಿಸಿದರು.