ಹಳ್ಳಿಹೊಳೆ: ಆಧುನಿಕ ಶಿಕ್ಷಣ ಪದ್ಧತಿಯನ್ನು ಹಳ್ಳಿಹೊಳೆಯಂತಹ ತೀರಾ ಗ್ರಾಮೀಣ ಭಾಗದ ಸರಕಾರಿ ಶಾಲೆಯಲ್ಲಿ ಅಳವಡಿಸಿಕೊಂಡು ಪರಿಸರದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವ ಅವಕಾಶವನ್ನು ಕಲ್ಪಿಸಿರುವುದು ಪ್ರಶಂಸನೀಯ. ಉತ್ತಮ ತಂತ್ರಜ್ಞಾನದಿಂದ ಗುಣಮಟ್ಟದ ಶಿಕ್ಷಣ ಉಪಯುಕ್ತ ಮಾಹಿತಿ ವಿನಿಮಯ ಮಾಡಿಕೊಳ್ಳಲು ಸಾಧ್ಯವಿದ್ದು, ವಿಧ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಂತಾಗಲಿ ಉತ್ತಮ ಶಿಕ್ಷಣದಿಂದ ಉತ್ತಮ ಭವಿಷ್ಯ ನಮ್ಮದಾಗುತ್ತದೆ ಎಂದು ರೋಟರಿ ವಲಯ ೧ರ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಹೇಳಿದರು.
ಅವರು ರೋಟರಿ ಕ್ಲಬ್ ಕುಂದಾಪುರ ವತಿಯಿಂದ ಹಳ್ಳಿಹೊಳೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಡಮಾಡಿದ ಇ ಲರ್ನಿಂಗ್ ಕಿಟ್ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಮಾತನಾಡಿದರು. ದಾನಿ ಅಮೇರಿಕಾದ ಸುಧೀರ ಕನ್ನಂತ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಂಡು, ಸ್ವಾಭಿಮಾನದ ಬದುಕನ್ನು ರೂಪಿಸಿಕೊಂಡು ಊರು ಹೆಮ್ಮೆ ಪಡುವಂತ ಕೆಲಸ ಮಾಡುವಂತೆ ಕಿವಿ ಮಾತು ಹೇಳಿದರು.
ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ದಾನಿ ವೆಂಕಟಾಚಲ ಕನ್ನಂತ, ರೋಟರಿ ಕುಂದಾಪುರ ಕಾರ್ಯದರ್ಶಿ ಸಂತೋಷ ಕೋಣಿ, ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೋಕ್ತಸರರಾದ ಶ್ರೀನಿವಾಸ ಚಾತ್ರ, ಉದ್ಯಮಿ ವಿರೂಪಾಕ್ಷ, ಶ್ರೀಕಾಂತ ಕನ್ನಂತ, ನಿವೃತ್ತ ಮುಖ್ಯೋಪಧ್ಯಾಯ ಚಕ್ರೇಶ್ ಯಡಿಯಾಳ್, ಹಳ್ಳಿಹೊಳೆ ಗ್ರಾ. ಪಂ. ಸದಸ್ಯ ಶ್ರೀಕರ ನಾಯ್ಕ್, ಆಜ್ರಿ-ಮಾನಂಜೆ ಸಿಆರ್‌ಪಿ ರಾಘವೇಂದ್ರ ಇನ್ನಿತರರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಶ್ರೀನಿವಾಸ ಜೋಶಿ ಸ್ವಾಗತಿಸಿದರು. ಸಹಶಿಕ್ಷಕ ಚಂದ್ರಶೇಖರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಭಾಸ್ಕರ ವಂದಿಸಿದರು.