ಬೈಂದೂರು: ಇಲಾಖೆಯಿಂದ ನೀಡುವ ಮಾಹಿತಿ, ತರಬೇತಿ ಪಡೆಯಲು ರೈತರು ತಯಾರಿಲ್ಲ. ಹಾಗಾಗಿ ಇಲ್ಲಿ ವ್ಯವಸ್ಥೆಗಳ ವೈಪಲ್ಯಕ್ಕಿಂತ ರೈತರ ಹಿಂಜರಿಕೆ ಎದ್ದು ಕಾಣುತ್ತಿದೆ. ಇಲಾಖೆಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿದ್ದರೂ ಒಂದುಕಡೆ ಮಾಹಿತಿ ಕೊರತೆ ಹಾಗೂ ಇನ್ನೊಂದೆಡೆ ಮಾರುಕಟ್ಟೆಯ ಸಮಸ್ಯೆಗಳಿಂದ ಇಂದಿನ ದಿನಗಳಲ್ಲಿ ರೈತ ಸೋಲುತ್ತಿದ್ದಾನೆ ಎಂದು ಉಪ್ಪುಂದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅಭಿಪ್ರಾಯಪಟ್ಟರು.
ನಾಗೂರು ಒಡೆಯರ ಮಠ ಲಲಿತಕೃಷ್ಣ ಸಭಾಗೃಹದಲ್ಲಿ ಉಡುಪಿ ಜಿಲ್ಲಾ ಪಂಚಾಯತ್, ಕುಂದಾಪುರ ತಾಲೂಕು ಪಂಚಾಯತ್ ಹಾಗೂ ತೋಟಗಾರಿಕಾ ಇಲಾಖೆಯ ಜಂಟಿ ಆಶ್ರಯದಲ್ಲಿ ರೈತ ಮಹಿಳೆಯರಿಗಾಗಿ ಆಯೋಜಿಸಿದ ಹಣ್ಣು-ತರಕಾರಿ ಬೆಳೆಯುವ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಕಡಿಮೆ ವೆಚ್ಚದಲ್ಲಿ ಅಧಿಕ ಉತ್ಪಾದನೆಯಾಗುವ ಇಳುವರಿಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ರೈತರಿಗೆ ಸೂಕ್ತ ಮಾಹಿತಿ ನೀಡಬೇಕಾದ ಅಗತ್ಯವಿದೆ. ರೈತರು ಬೆಳೆದ ಹಣ್ಣು ತರಕಾರಿಗಳನ್ನು ಸಂಸ್ಕರಿಸಿ ಮೌಲ್ಯವರ್ಧಿತ ವ್ಯವಸ್ಥೆಯಿಂದ ಹೆಚ್ಚಿನ ಲಾಭಗಳಿಸಹುದು. ಕೃಷಿಗೆ ಕಾರ್ಮಿಕರ ಕೊರತೆ ಇದ್ದು ಕಾಲಕ್ಕೆ ತಕ್ಕಂತೆ ವ್ಯವಸಾಯ ಬೇಕಾದರೆ ಯಾಂತ್ರಿಕೃತ ಬೇಸಾಯ ಪದ್ದತಿ ವೃದ್ಧಿಯಾಗಬೇಕು. ದುಡಿಯುವ ಕೈಗಳಿಗೆ ಕೆಲಸ ಭೇಕಾಗಿದ್ದು, ಮಹಿಳೆಯರೂ ಕೂಡಾ ಸ್ವ-ಉದ್ಯೋಗದತ್ತ ಹೋಗಬಹುದು. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೆಚ್ಚಿನ ಅನುದಾನ ನೀಡುತ್ತಿದೆ. ಎಂದರು.
ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಲಲಿತಾ ಅಧ್ಯಕ್ಷತೆವಹಿಸಿದ್ದರು. ಜಿಪಂ ಸದಸ್ಯೆ ಗೌರಿ ದೇವಾಡಿಗ ತರಬೇತಿ ಕಾರ್ಯಾಗಾರ ಉದ್ಘಾಟಿಸಿದರು. ತಾಪಂ ಸದಸ್ಯೆ ಶ್ಯಾಮಲಾ ಕುಂದರ್, ಗ್ರಾಪಂ ಉಪಾಧ್ಯಕ್ಷ ಶೇಖರ್ ಖಾರ್ವಿ, ಬ್ರಹ್ಮಾವರ ಕೃಷಿವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಹಾಗೂ ಸಂಪನ್ಮೂಲವ್ಯಕ್ತಿ ಡಾ. ಸತೀಶ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ವಿಶೇಷ ಸಹಕಾರ ನೀಡಿತ್ತು. ಆಶಾ ಪ್ರಾರ್ಥಿಸಿ, ಹಿರಿಯ ಸಕಾಯಕ ತೋಟಗಾರಿಕಾ ನಿರ್ದೇಶಕ ಕೆ.ಪಿ.ಚಿದಂಬರ್ ಪ್ರಾಸ್ತಾವಿಸಿದರು. ಸಹಾಯಕ ತೋಟಗಾರಿಕಾ ಅಧಿಕಾರಿ ರೇಷ್ಮಾ ಸ್ವಾಗತಿಸಿ, ಖಂ.ರೈ.ಸೇ.ಸ.ಸಂಘದ ವ್ಯಸ್ಥಾಪಕ ಹಾವಳಿ ಬಿಲ್ಲವ ನಿರೂಪಿಸಿದರು.