ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರದ್ಧಾಭಕ್ತಿಯ ಕ್ಷೇತ್ರ ಕೊಲ್ಲೂರು ದೇವಳದಲ್ಲಿ ನಡೆದಿರುವ ಕಳ್ಳತನದಿಂದಾಗಿ ಇತರೇ ರಾಜ್ಯದವರು ಕರ್ನಾಟಕವನ್ನು ಅನುಮಾನದ ದೃಷ್ಟಿಯಲ್ಲಿ ನೋಡುವಂತಾಗಿದು, ರಾಜ್ಯದ ಘನತೆ ಕುಗ್ಗವಂತಾಗಿದೆ. ಇಡಿ ಪ್ರಕರಣದ ಹಿಂದೆ ಕಾಣದ ಕೈ ಕೆಲಸಮಾಡಿದ್ದು, ಇದೂವರೆಗೆ ರಾಜ್ಯ ಸರಕಾರ ಘಟನೆ ಬಗ್ಗೆ ತುಟಿ ಬಿಚ್ಚದಿರುವುದು ಅಚ್ಚರಿ ಮೂಡಿಸಿದೆ. ಪ್ರಕರಣ ನ್ಯಾಯಸಮ್ಮತ ತನಿಖೆ ಮತ್ತು ಸತ್ಯ ಹೊರತರುವ ನಿಟ್ಟಿನಲ್ಲಿ ಸಿಬಿಐಗೆ ವಹಿಸಬೇಕು ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಆಗ್ರಹಿದ್ದಾರೆ.
ಕುಂದಾಪುರ ತಾಪಂ. ಮಾಜಿ ಅಧ್ಯಕ್ಷ ಬೆಳ್ಳಾಡಿ ಶಂಕರ ಶೆಟ್ಟಿ ಮನೆಯಲ್ಲಿ ನಾಡಾ ಗ್ರಾಮ ಸಾರ್ವಜನಿಕ ಸನ್ಮಾನ ಕಾರ‍್ಯಕ್ರಮದಲ್ಲಿ ಜಿಪಂ.ತಾಪಂ ವಿಜೇತ ಅಭ್ಯರ್ಥಿಗಳ ಸನ್ಮಾನಿಸಿ ಅವರು ಮಾತನಾಡಿದರು.
ಕೊಲ್ಲೂರು ಮೂಕಾಂಬಿಕೆ ಭಕ್ತರು ಭಯ, ಭಕ್ತಿಯಿಂದ ಅಭರಣ ಅರ್ಪಿಸುತ್ತಾರೆ. ಆದರೆ ದೇವಳದ ಸಿಬ್ಬಂದಿ ಭಯವಿಲ್ಲದೆ ಹಣ ಚಿನ್ನ ದೇವಸ್ಥಾನದಿಂದ ಸಲೀಸಾಗಿ ಹೊರಗೊಯ್ಯುತ್ತಾರೆ. ಇಲ್ಲಿ ಎಲ್ಲರ ಬೇಜವಾಬ್ದಾರಿ ಇರುವುದು ಸ್ಪಷ್ಟ. ಸರಕಾರ ನ್ಯಾಯಸಮ್ಮತ ತನಿಖೆ ಮಾಡದಿದ್ದರೆ ಹೋರಾಟದ ದಾರಿ ಹಿಡಿಯಬೇಕಾಗುತ್ತದೆ ಎಂದವರು ಎಚ್ಚರಿಸಿದರು.
ರಾಜಕೀಯದಲ್ಲಿ ನಿವೃತ್ತ ಎಂಬುದಿಲ್ಲ ಎಂದ ಅವರು, ಈ ಬಾರಿಯ ಜಿಪಂ, ತಾಪಂ ಚುನಾವಣೆಯಲ್ಲಿ ಅರ್ಹ ವ್ಯಕ್ತಿಗಳನ್ನು ಮತದಾರರು ಆಯ್ಕೆ ಮಾಡಿದ್ದಾರೆ. ಹಿಂದೆ ಬೈಂದೂರು ಶಾಸಕನಾಗಿದ್ದ ಕಾಲದಲ್ಲಿ ಬೈಂದೂರು ಕ್ಷೇತ್ರಕ್ಕೆ 500 ಕೋಟಿ ಅನುದಾನ ತಂದಿದ್ದು, ನನ್ನ ಕಾಲದಲ್ಲಿ ಆದ ಅಭಿವೃದ್ಧಿ ಕೆಲಸ ಗುರುತಿಸಿ ಮತದಾರರು ಈ ಬಾರಿ ಹೆಚ್ಚಿನ ಬಿಜೆಪಿ ಅಭ್ಯರ್ಥಿಗಳ ಗೆಲ್ಲಿಸಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಂಡ್ಸೆ ಜಿಪಂ ಸದಸ್ಯ ಬಾಬು ಶೆಟ್ಟಿ ತಗ್ಗರ್ಸೆ ಅವರನ್ನು ಲಕ್ಷ್ಮೀನಾರಾಯಣ್ ಮತ್ತು ನಾಡಾ ತಾಪಂ ಸದಸ್ಯ ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ ಅವರನ್ನು ಬಿ.ಎಂ.ಸುಕುಮಾರ್ ಶೆಟ್ಟಿ ಸನ್ಮಾನಿಸಿದರು. ಬೈಂದೂರು ಬ್ಲಾಕ್ ಬಿಜೆಪಿ ಅಧ್ಯಕ್ಷ ಬಿ.ಎಂ ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಪಂ ಮಾಜಿ ಅಧ್ಯಕ್ಷ ಬೆಳ್ಳಾಡಿ ಶಂಕರ ಶೆಟ್ಟಿ ಇದ್ದರು.